
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಂಜೆ 6 ಘಂಟೆಯ ನಂತರ ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಿದ ಹಿನ್ನಲೆಯಲ್ಲಿ ಹಾಗು ಸೆಕ್ಷನ್ 144 ಜಾರಿಯಲ್ಲಿರುವ ಹಿನ್ನಲೆಯಲ್ಲಿ ಮಂಗಳೂರು ನಗರ ಖಾಲಿ ಹೊಡೆಯುತ್ತಿದೆ. ಏಳರಿಂದ 9 ಗಂಟೆಯ ಅವಧಿಯಲ್ಲಿ ಗಿಜಿಗುಡುತ್ತಿದ್ದ ನಗರದ ಹಲವು ಪ್ರದೇಶಗಳು ಬಿಕೋ ಎನ್ನುತ್ತಿವೆ.
ನಿಷೇಧಾಜ್ಞೆ ಹಿನ್ನಲೆಯಲ್ಲಿ ಪೊಲೀಸರು ನಗರದ ಹಲವು ಜಂಕ್ಷನ್ ಹಾಗು ಮುಖ್ಯ ರಸ್ತೆ ಸೇರುವಲ್ಲಿ ಅಲ್ಲಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಸಂಚರಿಸುತ್ತಿರುವ ಎಲ್ಲಾ ವಾಹನಗಳನ್ನು ಬಿಡದೆ ತಪಾಸಣೆ ನಡೆಸುತ್ತಿದ್ದಾರೆ. ನಗರದ ಕೊಟ್ಟಾರ, ಕೆಪಿಟಿ ಕದ್ರಿ, ನಂತೂರು ಸರ್ಕಲ್, ಪಂಪವೆಲ್ ಮುಂತಾದುವೆಡೆಗಳಲ್ಲಿ ನಾಕಾಬಂಧಿ ಹಾಕಲಾಗಿದೆ.
ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ನಡೆದ 3 ಕೊಲೆಗಳು ರಾತ್ರಿ ಹೊತ್ತಿಗೆ ಆಗಿರುವುದರಿಂದ ಈ ಕೊಲೆಗಳಿಂದ ಪ್ರಚೋದನೆಗೊಂಡು ಮತ್ತಷ್ಟು ಅಪರಾಧಗಳು ನಡೆಯದಂತೆ ಮುಂಜರೂಕತಾ ಕ್ರಮವಾಗಿ ಮುಂದಿನ ಸೋಮವಾರದವರೆಗೆ ಸಂಜೆ 6ರಿಂದ ಬೆಳಗಿನ 6 ಗಂಟೆಯವರೆಗೆ ಅಂಗಡಿ ಮುಂಗಟ್ಟು, ಮಾಲ್, ಸಿನೆಮಾ ಮಂದಿರಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.













































