
ಮಂಗಳೂರು: ಇಂದು ರಾತ್ರಿಯಿಂದ ಸುರಿದ ಒಂದೇ ಮಳೆಗೆ ಸ್ಮಾರ್ಟ್ ಸಿಟಿ ಮಂಗಳೂರು ಮುಳುಗಡೆಯಾಗುವ ಮೂಲಕ ಸ್ಥಳೀಯ ಶಾಸಕ, ಸಂಸದ ಸೇರಿ ಜನಪ್ರತಿನಿಧಿಗಳನ್ನು ಬೆತ್ತಲಾಗಿಸಿದೆ. ನಗರದ ಹಲವು ಪ್ರದೇಶಗಳು, ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ವಾಹನ ಸಂಚಾರ ಕೂಡ ಮಾಡದಂತಹ ಪರಿಸ್ಥಿತಿ ಉಧ್ಭವವಾಗಿದೆ. ಹಲವು ಮನೆಗಳಿಗೂ ನೀರು ನುಗ್ಗಿದ್ದು ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದ ಜನತೆ ಸಂಕಷ್ಟಕ್ಕೆ ಒಳಗಾಗುವಂತೆ ಆಗಿದೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್ ರೈಲ್ವೆ ಬ್ರಿಡ್ಜ್’ನಿಂದ ಕಣ್ಣೂರುವರೆಗೆ ರಸ್ತೆ ಸಂಪೂರ್ಣ ನದಿ ರೀತಿಯಂತಾಗಿದ್ದು ರಸ್ತೆಯಲ್ಲೇ ನೀರು ಹರಿದು ಇಂದು ಮಧ್ಯಾಹ್ನದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೆಚ್ಚು ಕಮ್ಮಿ ಸೊಂಟದವರೆಗಿನ ನೀರಿನಿಂದಾಗಿ ದ್ವಿಚಕ್ರವಾಹನಗಳವರು ಉರುಳಿ ಬಿದ್ದ ಹಾಗು ಗಾಡಿ ಸೈಲೆನ್ಸರ್ ಗೆ ನೀರು ನುಗ್ಗಿ ಹಲವು ಗಾಡಿಗಳು ಕೆಟ್ಟು ನಿಂತ ಘಟನೆಗಳಿಗೆ ಸಾಕ್ಷಿಯಾದವು. ಹಲವು ಮಂದಿ ಈ ಹೊಸದಾಗಿ ಸೃಷ್ಟಿಯಾದ “ಪಡೀಲ್’ನಾಶಿನಿ” ನದಿಯನ್ನು ದಾಟಲಾಗದೆ ವಾಪಸು ಹೋದ ಘಟನೆಗಳೂ ನಡೆದವು. ಹತ್ತಿರದ ಫಸ್ಟ್ ನ್ಯೂರೋ ಆಸ್ಪತ್ರೆಯ ಮೆಟ್ಟಿಲವರೆಗೆ ನೀರು ಹರಿದು ಕೆಲ ಹೊತ್ತು ಆತಂಕ ಸೃಷ್ಟಿಸಿತು. ಕಿಲೋ ಮೀಟರ್ ಗಟ್ಟಲೆ ಉದ್ದದ ಟ್ರಾಫಿಕ್ ಜಾಮಿನಿಂದಾಗಿ ಕೆಲಸಕ್ಕೆ ಹೋಗುವ ಎಲ್ಲರೂ ಸಮಯಕ್ಕೆ ಸರಿಯಾಗಿ ಹೋಗಲಾಗದೆ ತೊಂದರೆ ಅನುಭವಿಸುವಂತಾಯಿತು. ಜನರ ಬವಣೆ ನೋಡಲಾಗದೆ ಕೊನೆಗೆ ವರುಣನೇ ತನ್ನ ಬಿರುಸನ್ನು ಕಡಿಮೆ ಮಾಡಿ ನದಿಯನ್ನು ಮತ್ತೆ ರಸ್ತೆ ಮಾಡಬೇಕಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಕೊಟ್ಟಾರ ಚೌಕಿ ಸಂಪೂರ್ಣ ಮುಳುಗಡೆಯಾಗಿದ್ದು ಹೆದ್ದಾರಿ, ಸರ್ವಿಸ್ ರಸ್ತೆಗಳಲ್ಲಿ ಸುಮಾರು 5 ರಿಂದ 6 ಅಡಿ ಎತ್ತರದವರೆಗೂ ನೀರು ತುಂಬಿ ಹರಿಯಿತು. ಇಲ್ಲಿನ ರಾಜಕಾಲುವೆ ತುಂಬಿ ನೀರು ರಸ್ತೆಗೆ ನುಗ್ಗಿದ್ದು ಸಮೀಪದ ಮಾಲೇಮಾರ್ ವಸತಿ ಪ್ರದೇಶ ಸಂಪೂರ್ಣ ಮುಳುಗಡೆಯಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆ ಒಳಗಿನ ಎಲ್ಲ ಪೀಠೋಪಕರಣ, ಟಿವಿ, ಫ್ರಿಡ್ಜ್ ಸಹಿತ ಹಲವು ಉಪಕರಣಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ರಾಜಕಾಲುವೆಯಲ್ಲಿ ಹೂಳು ಎತ್ತುವ ಕಾರ್ಯ ಮಾಡದೇ ಇರುವುದು , ಅಲ್ಲಲ್ಲಿ ರಾಜಕಾಲುವೆಯ ಪಕ್ಕದ ಮಣ್ಣು ಕುಸಿದು ನೀರು ಹರಿವಿಗೆ ತಡೆ ಉಂಟಾಗಿರುವುದು ಹಾಗು ರಾಜಕಾಲುವೆ ಪಕ್ಕ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವುದು ಪ್ರತಿ ವರ್ಷ ಪುನರಾವರ್ತಿಸುವ ಸಮಸ್ಯೆಗೆ ಕಾರಣ. ಈ ಬಗ್ಗೆ ಸ್ಥಳೀಯ ಜನರು ಶಾಸಕ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜಕಾಲುವೆ ಸರಿ ಮಾಡದೆ ಪ್ರತಿ ವರ್ಷ ಮಳೆಗಾಲದಲ್ಲಿ ನಾವು ಭಯದಿಂದ ಕಾಲ ಕಳೆಯುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ಮಾಲೇಮಾರ್ ಕೋಡಿಕಲ್ ಸೇರಿ ಹಲವು ಪ್ರದೇಶಗಳಲ್ಲಿ ಮನೆಗಳು ಜಲಾವೃತವಾಗಿವೆ. ನಗರದ ಹೆಚ್ಚಿನ ರಸ್ತೆಗಳನ್ನು ಕಾಮಗಾರಿಗಾಗಿ ಅಗೆದು ಇಟ್ಟಿರುವ ಕಾರಣ ಗುಂಡಿ ಯಾವುದು ರಸ್ತೆ ಯಾವುದು ಎನ್ನುವ ಗೊಂದಲ ಹಾಗು ಭಯದಲ್ಲಿ ವಾಹನ ಸವಾರರು ಸಾಗುವಂತಾಗಿದೆ.
ದಿನದ ಹಿಂದಷ್ಟೇ ಪಂಪವೆಲ್ ಫ್ಲೈ ಓವರ್ ಕೆಳಗಿನ ರಸ್ತೆಗಳಲ್ಲಿ ಪೈಪ್ ಒಡೆದು ಅಲ್ಲಲ್ಲಿ ಕಾರಂಜಿಗಳು ಸೃಷ್ಟಿಯಾದ ಕಾರಣ ನಗರ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲೇ ಬ್ಯಾರಿಕೇಜ್ ಹಾಕಲಾಗಿದೆ. ನಗರ ಒಳಗಿನ ಹಲವು ರಸ್ತೆಗಳನ್ನು ಅಗೆದು ಅರ್ಧಂಬರ್ಧ ಕಾಮಗಾರಿ ನಡೆಸಿ ಇದ್ದ ಒಳ್ಳೆಯ ರಸ್ತೆಗಳನ್ನು ಹಾಳುಗೆಡವಲಾಗಿದೆ. ಕಾಂಕ್ರೀಟ್ ರಸ್ತೆ ಅಗೆದ ಜಾಗದಲ್ಲಿ ಡಾಮರು ಹಾಕಿ ವಿಚಿತ್ರ ಕಾಮಗಾರಿ ನಡೆಸಲಾಗಿದೆ. ಅರ್ಧ ರಸ್ತೆ ಕಾಂಕ್ರೀಟ್, ಉಳಿದ ಜಾಗ ಡಾಮರು ಎನ್ನುವಂತಾಗಿದೆ. ಕೆಲವೆಡೆ ಬರೀ ಮಣ್ಣುಮುಚ್ಚಿ ಆ ಮಣ್ಣು ಮಳೆ ನೀರಿಗೆ ಕೊಚ್ಚಿ ಹೋಗಿ ರಸ್ತೆಗಳಲ್ಲಿ ಕಣಿವೆಗಳು ಸೃಷ್ಟಿಯಾಗಿವೆ. ಈ ರೀತಿಯ ಅವ್ಯವಸ್ಥೆ ಈ ಮೊದಲು ಇರಲಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಎಂದರೆ ಬರೀ ರಸ್ತೆ ಕಾಮಗಾರಿ ಎಂಬಂತೆ ವರ್ತಿಸುತ್ತಿರುವ ದೂರದೃಷ್ಟಿ ಹೊಂದಿಲ್ಲದ ಸ್ಥಳೀಯ ಜನಪ್ರತಿನಿಧಿಗಳು ಮಂಗಳೂರನ್ನು ಒಂದು ಮಾದರಿ ಸ್ಮಾರ್ಟ್ ಸಿಟಿಯನ್ನಾಗಿಸುವ ಅವಕಾಶವನ್ನು ಈಗಾಗಲೇ ಹಾಳುಗೆಡವಿದ್ದಾರೆ ಎಂದೇ ಹೇಳಬಹುದು. ವರ್ಷದ ಹಿಂದಿನಿಂದ ಕುಂಟುತ್ತಾ ಸಾಗಿದ ಕದ್ರಿ ಪಾರ್ಕ್ ಮುಂಭಾಗದ ರಸ್ತೆ ಹಾಗು ಸೌಕರ್ಯ ಅಭಿವೃದ್ಧಿ, ನಗರದಾದ್ಯಂತ ಕ್ಯಾಮೆರಾ ಕಣ್ಗಾವಲು ಬಿಟ್ಟರೆ ಬೇರೆ ಯಾವುದೇ ಕಣ್ಣಿಗೆ ರಾಚುವ ಯೋಜನೆಗಳು ಕಂಡುಬರುತ್ತಿಲ್ಲ. ಮಂಗಳೂರು ನಗರ ಮಿತಿ ಬಿಟ್ಟು ಮಹಾನಗರದ ಇತರೆ ಪ್ರದೇಶಗಳ ಬಗ್ಗೆ ಕೂಡ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಗಮನಹರಿಸಿದಂತೆ ಕಾಣುತ್ತಿಲ್ಲ. ನಗರದ ಹಲವು ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲ ಅನ್ನುವುದು ಅಚ್ಚರಿಯಾದರೂ ಸತ್ಯ. ಮಾಡಿದ ಕಾಮಗಾರಿಗಳಾದರೂ ಸರಿಯಿದೆಯೇ ಎಂದರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇದೀಗ ನಗರ ಮುಳುಗಡೆಯಾಗುವಂತಾಗಿದೆ.
ಒಟ್ಟಿನಲ್ಲಿ ಅವ್ಯವಸ್ಥಿತ ಮಂಗಳೂರು ನಗರ ಪ್ರತಿವರ್ಷದಂತೆ ಮತ್ತೊಮ್ಮೆ ಹೊರ ಜಗತ್ತಿನ ಮುಂದೆ ಬೆತ್ತಲಾಗಿದ್ದು ಕರಾವಳಿಗರು ಬವಣೆ ಪಡುವಂತಾಗಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL