
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೆ ಮಂಗಳೂರು ಸಮೀಪದ ಸುರತ್ಕಲ್‌ನಲ್ಲಿ ಬರ್ಬರವಾಗಿ ಹತ್ಯೆಗೀಡಾದ ಫಾಜಿಲ್‌ನ ತಂದೆ ಫಾರೂಕ್ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರ ವಿರುದ್ಧ ಸೋಮವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಮಾತನಾಡಿದ ಶರಣ್ ಪಂಪವೆಲ್ ಅವರು ‘ನಮ್ಮ ಹಿಂದೂ ಯುವಕ ಪ್ರವೀಣ್ ನೆಟ್ಟಾರು ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹಿಂದೂ ಕಾರ್ಯಕರ್ತರು ಸುರತ್ಕಲ್ ನಲ್ಲಿ ಫಾಜಿಲ್‌ನನ್ನು ಹತ್ಯೆ ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಅದನ್ನು ಉಲ್ಲೇಖಿಸಿ ಫಾಜಿಲ್ ಅವರ ತಂದೆ ಫಾರೂಕ್, “ನಮಗೆ ಈ ಮೊದಲು ಅನುಮಾನವಿತ್ತು. ಆದರೆ, ಈಗ ಅವರೇ ನನ್ನ ಮಗನನ್ನು ಕೊಂದಿದ್ದಾರೆ ಎಂದು ಶರಣ್ ಪಂಪ್‌ವೆಲ್ ಹೇಳಿಕೆಯಿಂದ ಗೊತ್ತಾಗಿದೆ. ತನ್ನ ಮಗನ ಹತ್ಯೆಯ ಹಿಂದಿರುವವರನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಒತ್ತಾಯಿಸಿದ್ದೇನೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದ್ದಾರೆ.
ಶೌರ್ಯ ಯಾತ್ರೆ ವೇಳೆ ಹೇಳಿಕೆ ನೀಡಿದ್ದ ಶರಣ್ ಪಂಪ್‌ವೆಲ್, “ಅಗತ್ಯ ಸಂದರ್ಭಗಳಲ್ಲಿ ಭಜರಂಗದಳ ಹೋರಾಟ ಮಾಡುತ್ತದೆ, ಕೆಲವೊಮ್ಮೆ ನಾವು ನುಗ್ಗಿ ಹೊಡೆಯುತ್ತೇವೆ. ನಮ್ಮ ಯುವಕ ಪ್ರವೀಣ್ ನೆಟ್ಟಾರು ಕೊಲೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಆಗ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಇರಲಾಗಲಿಲ್ಲ. ಪ್ರವೀಣ್ ನೆಟ್ಟಾರು ಹತ್ಯೆಗೆ ಸೇಡು ತೀರಿಸಲು ಸುರತ್ಕಲ್ಗೆ ಹೋಗಿ ನುಗ್ಗಿ ಹೊಡೆದರು. ಅದು ನಮ್ಮ ಶೌರ್ಯ ಎಂದು ಬಹಿರಂಗವಾಗಿಯೇ ಹೇಳಿದ್ದರು.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL