Karnataka

ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ 4 ಮಸೂದೆ ಅಂಗೀಕಾರ: ಮತಾಂತರ ನಿಷೇಧ ಮಸೂದೆಗೆ ಕೂಡಿ ಬರಲಿಲ್ಲ ಕಾಲ

ಬೆಂಗಳೂರು: ಕೇಸರಿ ಹಾಗು ರಾಷ್ಟ್ರ ಧ್ವಜದ ಕುರಿತು ಹೇಳಿಕೆ ನೀಡಿರುವಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್‌ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ಶಾಸಕರು ನಡೆಸುತ್ತಿರುವ ಪ್ರತಿಭಟನೆ, ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ನಾಲ್ಕು ವಿಧೇಯಕಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ.

ಕ್ರಿಮಿನಲ್ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ, 1944, (ಕರ್ನಾಟಕ ತಿದ್ದುಪಡಿ ಮಸೂದೆ, 2022); ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ಮಸೂದೆ, 2022, ಕರ್ನಾಟಕ ಸ್ಟ್ಯಾಂಪ್ (ಎರಡನೇ ತಿದ್ದುಪಡಿ) ಮಸೂದೆ, 2022 ಮತ್ತು ಕರ್ನಾಟಕ ಸಿವಿಲ್ ಸರ್ವಿಸಸ್ (2011 ರ ಬ್ಯಾಚ್ ಗೆಜೆಟೆಡ್ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ) ಮಸೂದೆ, 2022 ಅಂಗೀಕಾರಗೊಂಡ ನಾಲ್ಕು ಮಸೂದೆಗಳಾಗಿವೆ.

ಆದರೆ ಈ ಬಾರಿಯ ಅಧಿವೇಶನದಲ್ಲೂ ಮತಾಂತರ ನಿಷೇಧ ಕಾಯ್ದೆಯನ್ನು ಪರಿಷತ್ತಿನಲ್ಲಿ ಅಂಗೀಕಾರಗೊಳಿಸಿಕೊಳ್ಳಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿದ್ದು, ಪರಿಷತ್ತಿನಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದಿದ್ದ ಕಾರಣ ಅಂಗೀಕಾರ ಪಡೆಯುವುದು ಬಾಕಿಯಿತ್ತು. ಎರಡೂ ಮನೆಗಳಲ್ಲಿ ಒಪ್ಪಿಗೆ ಪಡೆಯದೇ ಮತಾಂತರ ನಿಷೇಧ ಕಾಯ್ದೆಯನ್ನು ಕಾನೂನಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಇದೀಗ ಪರಿಷತ್ತಿಗೆ ಚುನಾವಣೆ ನಡೆದು ಬಿಜೆಪಿ ಸ್ಥಾನಗಳನ್ನು ವೃದ್ಧಿಸಿಕೊಂಡಿದ್ದು ಪಕ್ಷೇತರ ಸದಸ್ಯ ಲಖನ್ ಜಾರಕಿಹೋಳಿ ಬೆಂಬಲದೊಂದಿಗೆ ಮಸೂದೆಯನ್ನು ಪರಿಷತ್ತಿನಲ್ಲಿ ಸರಳ ಬಹುಮತದೊಂದಿಗೆ ಅಂಗೀಕರಿಸಲು ಅವಕಾಶ ಇದೆ. ಆದರೆ ಸ್ವತಃ ಕಾನೂನು ಸಚಿವರೇ ತರಾತುರಿಯಲ್ಲಿ ಮಸೂದೆ ಮಂಡನೆಗೆ ಒಪ್ಪಿಲ್ಲ ಎನ್ನಲಾಗಿದೆ.

Exit mobile version