
ಬೆಂಗಳೂರು: ಹಲವು ಸಮಯಗಳಿಂದ ಪೊಲೀಸರಿಗೆ ಸಿಗದೇ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಮೂವರು ಹೈಫೈ ಕಳ್ಳರನ್ನು ಕೊನೆಗೂ ಬಂಧಿಸಲಾಗಿದೆ. ವಿಶೇಷವೆಂದರೆ ಈ ಕಳ್ಳರು ಪಶ್ಚಿಮ ಬಂಗಾಳದಿಂದ ವಿಮಾನದ ಮೂಲಕ ನಗರಕ್ಕೆ ಬಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕಳವು ಮಾಡುತ್ತಿದ್ದರು.
ಬಂಧಿತರನ್ನು ಪಶ್ಚಿಮ ಬಂಗಾಳ ಮೂಲದ ಹರಿದಾಸ್ ಬರಾಯಿ (37), ಪಾರ್ಹಹಲ್ದಾರ್ ಅಲಿಯಾಸ್ ರಾಕೇಶ್(32), ರತನ್ ಸಾಹಾ (52) ಎಂದು ಗುರುತಿಸಲಾಗಿದೆ. ಈ ಕಳ್ಳರಿದ ಸುಮಾರು 38 ಲಕ್ಷ ರೂಪಾಯಿ ಬಬೆಲೆಯ 745 ಗ್ರಾಮ್ ಚಿನ್ನದ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇವರಲ್ಲಿ ಹರಿದಾಸ್ ಈ ಗುಂಪಿನ ರೂವಾರಿ ಆಗಿದ್ದು ಈತನ ವಿರುದ್ಧ ಈಗಾಗಲೇ ದೆಹಲಿ ಹಾಗು ಸಿಕಂದರಾಬಾದ್ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿ ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾನೆ.
ನಗರಕ್ಕೆ ಆಗಮಿಸುತ್ತಿದ್ದ ಇವರು ಮನೆ ಮುಂದೆ ಬಿದ್ದಿರುವ ದಿನಪತ್ರಿಕೆಗಳನ್ನು ಗಮನಿಸಿ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಆ ನಂತರ ಕಳ್ಳತನಕ್ಕೆ ಇಳಿಯುತ್ತಿದ್ದರು. ಈಗ ಈ ಮೂವರು ಹೈ-ಫೈ ಕಳ್ಳರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಇವರ ತಂಡದಲ್ಲಿ ನಾಲ್ಕರಿಂದ ಐದು ಮಂದಿ ಇರುತ್ತಿದ್ದು, 2-3 ಮನೆಗಳನ್ನು ಆಯ್ಕೆ ಮಾಡಿಕೊಂಡು ಕಳವು ಮಾಡುತ್ತಿದ್ದರು. ಈ ಖದೀಮರು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಪ್ರದೇಶಗಳಲ್ಲಿ ಮೊದಲಿಗೆ ಮೋಟಾರು ಬೈಕ್‌ಗಳನ್ನು ಕಳವು ಮಾಡಿ ಮನೆಗಳನ್ನು ಗುರುತಿಸಲು ಹೋಗುತ್ತಿದ್ದರು. ಯಾವುದೇ ಮನೆ ಮುಂದೆ 4-5 ದಿನದ ದಿನಪತ್ರಿಕೆ ಬಿದ್ದಿದೆ ಎಂದಾದರೆ ಆ ಮನೆಯನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಬಳಿಕ ನೆರೆಹೊರೆಯ ಮನೆಗಳವರ ಚಲನವಲನಗಳ ಮೇಲೆ ನಿಗಾವಹಿಸುತ್ತಿದ್ದರು. ಮತ್ತು ಅದೇ ದಿನ ರಾತ್ರಿ ಆ ಮನೆಯ ಬೀಗ ಮುರಿದು ಮನೆಯನ್ನು ದೋಚಿ ಪರಾರಿಯಾಗುತ್ತಿದ್ದರು.
ದೋಚಿದ ಚಿನ್ನಾಭರಣಗಳನ್ನು ಸ್ಥಳೀಯವಾಗಿ ಗಿರವಿ ಇಟ್ಟು ದುಡ್ಡು ಪಡೆದು ಪರಾರಿಯಾಗುತ್ತಿದ್ದರು. ಮತ್ತೆ ಸ್ವಲ್ಪ ದಿನ ಕಳೆದ ಬಳಿಕ ಮತ್ತೆ ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು.












































