
ಬೆಂಗಳೂರು: ಜನರ ಗಮನ ಬೇರೆಡೆ ಸೆಳೆದು ಹಾಗು ಕಾರಿನ ಗ್ಲಾಸ್ ಒಡೆದು ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಕುಖ್ಯಾತ ಒಜಿಕುಪ್ಪಂ ಗ್ಯಾಂಗ್‌ನ ದಂಪತಿ ಸೇರಿ ಒಟ್ಟು ಮೂರು ದರೋಡೆಕೋರರನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 1.22 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂಲತಃ ಆಂಧ್ರ ಪ್ರದೇಶದ ಓಜಿಕುಪ್ಪಂನ ನಿವಾಸಿ ರತ್ನಕುಮಾರ್ ಅಲಿಯಾಸ್ ರೆಡ್ಡಿ (40) ಹಾಗೂ ಆತನ ಪತ್ನಿ ಚೆನ್ನೈನ ತಾಸಿನ್‌ಫಾತಿಮಾ ಅಲಿಯಾಸ್ ತನು (36), ಭಾಮೈದ ಮಹಮದ್ ಹರ್ಷದ್ ನದೀಮ್ (34) ಬಂಧಿತ ಆರೋಪಿಗಳಾಗಿದ್ದಾರೆ. ಈ ಗ್ಯಾಂಗ್ 2015 ರಿಂದ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ನಗದು, ಚಿನ್ನ, ಮೊಬೈಲ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿತ್ತು.
ಈ ಆರೋಪಿಗಳು ಕಳೆದ ತಿಂಗಳು ಏಪ್ರಿಲ್ ೨೮ರಂದು ಬೆಳಿಗ್ಗೆ 11ಕ್ಕೆ ವ್ಯಕ್ತಿಯೊಬ್ಬರ ಕಾರಿನ ಗ್ಲಾಸ್ ಒಡೆದು 1 ಕೆ.ಜಿ. 179 ಗ್ರಾಂ ಚಿನ್ನ, 186 ಗ್ರಾಂ ವಜ್ರದ ಒಡವೆಗಳನ್ನು ದರೋಡೆ ಮಾಡಿದ್ದರು. ಈ ಚಿನ್ನಾಭರಣಗಳು ವ್ಯಕ್ತಿಯೊಬ್ಬರು ತಲಘಟ್ಟಪುರದ ರಘುವನಹಳ್ಳಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್‌ನಲ್ಲಿಟ್ಟಿದ್ದವು ಆಗಿತ್ತು. ಆ ದಿನ ಬ್ಯಾಂಕ್ ಲಾಕರಿನಿಂದ ತೆಗೆದು ಬ್ಯಾಂಕ್‌ನ ಮುಂಭಾಗ ನಿಲ್ಲಿಸಿದ್ದ ಕಾರಿನಲ್ಲಿ ಆಭರಣಗಳ ಬ್ಯಾಗ್ ಇಟ್ಟು, ಪಕ್ಕದಲ್ಲಿಯೇ ನರ್ಸರಿಗೆ ಗಿಡ ಖರೀದಿಸಲು ಹೋಗಿದ್ದರು. 5 ನಿಮಿಷದ ಬಳಿಕ ಕಾರ್ ಬಳಿಗೆ ಬಂದು ನೋಡುವಷ್ಟರಲ್ಲಿ ಕಾರಿನ ಹಿಂಭಾಗದ ಗ್ಲಾಸ್ ಒಡೆದು ಅಭರಣಗಳಿದ್ದ ಬ್ಯಾಗ್‌ನ್ನು ಕಳವು ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಡಿಸಿಪಿ ಹರೀಶ್ ಪಾಂಡೆಯವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಸಿ.ಸಿ. ಟಿವಿ ದೃಶ್ಯಗಳು, ಸ್ಥಳೀಯರಿಂದ ಬಂದ ಮಾಹಿತಿಯ ಪ್ರಕಾರ ಇದು ಓಜಿಕೊಪ್ಪಮ್ ಗ್ಯಾಂಗ್ ಕೃತ್ಯ ಎಂದು ತಿಳಿದುಬಂದಿತ್ತು. ಮೊದಲಿಗೆ ರತ್ನಕುಮಾನನ್ನು ಬಂಧಿಸಿ ಆ ನಂತರ ಆತ ನೀಡಿದ ಮಾಹಿತಿ ಅನ್ವಯ ಚೆನ್ನೈನ ಪಾಂಡಿಯನ್ ನಗರದಲ್ಲಿದ್ದ ಆತನ ಪತ್ನಿ ಫಾತಿಮಾಳನ್ನು ಬಂಧಿಸಲಾಗಿತ್ತು. ಇವರಿಬ್ಬರು ಕಳವು ಮಾಡಿದ ಆಭರಣಗಳನ್ನು ಚೆನ್ನೈನಲ್ಲಿದ್ದ ಭಾಮೈದ ಮಹಮದ ಹರ್ಷದ್ ನದೀಮ್‌ಗೆ ನೀಡಿ, ಆತನಿಂದ ಮಾರಾಟ ಮಾಡಿಸಲು ಸಂಚು ರೂಪಿಸಿದ್ದರು. ಕಳವು ಮಾಡಿದ್ದ ಆಭರಣಗಳಲ್ಲಿ 200 ಗ್ರಾಂ ಚಿನ್ನ ಹಾಗೂ 10 ಗ್ರಾಂ ಈಗಾಗಲೇ ಮಾರಿಕೊಂಡಿದ್ದರು.
ಬಂಧಿತರಿಂದ ಮಾರಾಟಕ್ಕೆ ಬಾಕಿಯಿದ್ದ 42 ಲಕ್ಷ ರೂ. ಬೆಲೆ ಬಾಳುವ 875 ಗ್ರಾಂ ಚಿನ್ನದ ಒಡವೆಗಳು ಹಾಗೂ 65 ಲಕ್ಷ ಬೆಲೆಯ 116 ಗ್ರಾಂ ವಜ್ರದ ಆಭರಣ ಸೇರಿ ಒಟ್ಟು 1 ಕೋಟಿ 22 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.












































