
ಬೆಂಗಳೂರು: ಬೆಂಗಳೂರು ಪೊಲೀಸ್‌ನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ಮಿಲಿಟರಿ ಗುಪ್ತಚರ ದಳ ಜಂಟಿ ಕಾರ್ಯಾಚರಣೆಯಲ್ಲಿ ದೇಶದ ರಕ್ಷಣಾ ಸಂಸ್ಥೆಗಳ ಹಾಗು ದೇಶದ ಗುಪ್ತಚರ ಸಂಬಂಧಿತ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಜಾಲವನ್ನು ಭೇದಿಸಿ ಓರ್ವ ಉಗ್ರನನ್ನು ಬಂಧಿಸಿದೆ.
ನಗರದಲ್ಲಿ ಅಕ್ರಮವಾಗಿ ದೂರವಾಣಿ ವಿನಿಮಯ ಕೇಂದ್ರವನ್ನು ನಡೆಸುತ್ತಿದ್ದ, ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳದ ವಯನಾಡ್ ಮೂಲದ 41 ವರ್ಷದ ಶರಾಫುದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪ್ರಕಾರ, ರಕ್ಷಣಾ ಸ್ವತ್ತುಗಳ ಬಗ್ಗೆ ಪಾಕಿಸ್ತಾನದ ಗೂಢಚಾರರಿಂದ ಅನುಮಾನಾಸ್ಪದ ಕರೆಗಳ ಮೂಲಕ ಆರೋಪಿಗಳು ಭದ್ರತಾ ಪಡೆಗಳ ರಾಡಾರ್‌ಗೆ ಸಿಲುಕಿದ್ದಾರೆ.
“ಶರಫುದ್ದೀನ್‌ನನ್ನು 10 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನದಿಂದ ಮತ್ತು ಇತರ ದೇಶಗಳಿಂದಲೂ ಕರೆ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರಿದಿದೆ” ಎಂದು ಸಿಸಿಬಿ ಮುಖ್ಯಸ್ಥ ರಮಣ ಗುಪ್ತಾ ತಿಳಿಸಿದ್ದಾರೆ.
ಆರೋಪಿಯು ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಲು ನಗರದಾದ್ಯಂತ ಹಲವಾರು ದೂರವಾಣಿ ವಿನಿಮಯ ಕೇಂದ್ರಗಳನ್ನು ತೆರೆದಿದ್ದನು. ತನಿಖೆಯ ಸಮಯದಲ್ಲಿ, ಅಧಿಕಾರಿಗಳು 2,144 ಮೊಬೈಲ್ ಸಿಮ್ ಕಾರ್ಡ್‌ಗಳು ಮತ್ತು 58 ಸಿಮ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯವಾಗಿ ಪರಿವರ್ತಿಸಲು ಬಳಸಲಾಗಿದೆ ಎಂದು ವರದಿಯಾಗಿದೆ. ಸಿಸಿಬಿ ಪ್ರಕಾರ, ಈ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಒಡಿಶಾ ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಂದ ಖರೀದಿಸಲಾಗಿದೆ. ಉತ್ತರ ಬೆಂಗಳೂರಿನ ಭುವನೇಶ್ವರಿನಗರ, ಚಿಕ್ಕಸಂದ್ರ ಮತ್ತು ಸಿದ್ಧೇಶ್ವರದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿ ಬಾತ್ ರೂಂನಲ್ಲಿ ಇಟ್ಟಿದ್ದ ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ.
ಸಿಸಿಬಿ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಪ್ರಕಾರ, ಇನ್ನೂ ಹಲವಾರು ಆರೋಪಿಗಳು ಸಹ ಪ್ರಕರಣದ ಭಾಗವಾಗಿರುವ ಸಾಧ್ಯತೆಯಿದೆ. ತನಿಖಾ ಸಂಸ್ಥೆಗಳು ಈ ವಿಷಯವು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.












































