Karnataka

ನಾರಾಯಣಗುರುಗಳ ಹೆಸರು ಬಳಸಿ ಸಿದ್ದರಾಮಯ್ಯ ಜಾತಿ ವೈಷಮ್ಯ ಸೃಷ್ಟಿಸುತ್ತಿದ್ದಾರೆ: ಸಚಿವ ಸುನಿಲ್ ಕುಮಾರ್ ಆಕ್ರೋಶ

ಬೆಂಗಳೂರು: ಬ್ರಹ್ಮಶ್ರೀ ನಾರಾಯಣಗುರುವರ್ಯರ ವಿಚಾರವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸಿಗರು ಜಾತಿ ವೈಷಮ್ಯ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹಾಗು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕಮ್ಯುನಿಷ್ಟ್ ಸರಕಾರ ಕೇರಳದಲ್ಲಿ ನಾರಾಯಣಗುರುಗಳ ಮೂರ್ತಿಯನ್ನು ಭಗ್ನ ಮಾಡಿತ್ತು. ಈಗ ಅವರೇ ನಾರಾಯಣ ಗುರುಗಳ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗು ಇತರ ಕಾಂಗ್ರೆಸಿಗರು ನಾರಾಯಣಗುರುಗಳ ಭಕ್ತರು ಹಾಗು ಅನುಯಾಯಿಗಳಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರಿಗೆ ನಾರಾಯಣಗುರುಗಳ ಬಗ್ಗೆ ಅಪಾರವಾದ ಗೌರವವಿದ್ದು ಈ ಹಿಂದೆ ೨೦೧೫ರಲ್ಲಿ ಶಿವಗಿರಿ ಮಠಕ್ಕೆ ಭೇಟಿ ನೀಡಿ ನಾರಾಯಣಗುರುಗಳನ್ನು ಹಾಡಿ ಹೊಗಳಿದ್ದರು. ನಾರಾಯಣಗುರುಗಳ ಸಾಮಾಜಿಕ ಪರಿವರ್ತನೆಯಿಂದಾಗಿ ಕೆರದಲ್ಲಿ ಸಮಾನತೆ ಬಂದಿದೆ. ನಾರಾಯಣಗುರುಗಳ ಆದರ್ಶ ಜಗತ್ತಿಗೆ ಬೆಳಕು ನೀಡುವಂತದ್ದು ಎಂದು ಪ್ರಧಾನಿ ಈ ಸಂದರ್ಭ ಹೇಳಿದ್ದರು ಎಂಬುದನ್ನು ಪ್ರಕಟಣೆಯಲ್ಲಿ ಸ್ಮರಿಸುವ ಮೂಲಕ ಸುನಿಲ್ ಕುಮಾರ್ ಹಾಗು ಮಾಲಿಕಯ್ಯ ಗುತ್ತೇದಾರ್ ಕೇಂದ್ರದ ಬೆನ್ನಿಗೆ ನಿಂತಿದ್ದಾರೆ.

ನಾರಾಯಣಗುರುಗಳ ಸ್ತಬ್ಧ ಚಿತ್ರ ತಿರಸ್ಕರಿಸಿ ಶಂಕರಾಚಾರ್ಯರ ಸ್ತಬ್ಧ ಚಿತ್ರ ಕಳುಹಿಸುವಂತೆ ಕೇಂದ್ರ ಹೇಳಿದೆ ಎಂಬುದು ಶುದ್ಧ ಸುಳ್ಳಾಗಿದ್ದು ಕಾಂಗ್ರೆಸಿಗರು ಸುಳ್ಳನ್ನೇ ಸತ್ಯವೆಂಬಂತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Exit mobile version