Karnataka

ಮಾಜಿ‌ ಸಂಸದ ಮುದ್ದಹನುಮೇಗೌಡ, ಚಿತ್ರದುರ್ಗ ಮಾಜಿ ಸಂಸದ ನಟ ಶಶಿಕುಮಾರ್ ಬಿಜೆಪಿ ಸೇರ್ಪಡೆ

ಬೆಂಗಳೂರು: ತುಮಕೂರು ಮಾಜಿ‌ ಸಂಸದ ಎಸ್​.ಪಿ. ಮುದ್ದಹನುಮೇಗೌಡ, ಚಿತ್ರದುರ್ಗ ಮಾಜಿ ಸಂಸದ ಕನ್ನಡ ನಟ ಶಶಿಕುಮಾರ್ ಹಾಗು ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಗುರುವಾರ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಎಸ್​.ಪಿ. ಮುದ್ದಹನುಮೇಗೌಡ, ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಇಂದು ಬಿಜೆಪಿ ರಾಜ್ಯ ಪ್ರಮುಖ ನಾಯಕರ ಸಮ್ಮುಖ ಪಕ್ಷಕ್ಕೆ ಸೇರ್ಪಡೆಯಾದರು. ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಬ್ಬರಿಗೂ ಬಿಜೆಪಿ ಶಾಲು ಹೊದಿಸಿ, ಬಿಜೆಪಿ ಬಾವುಟ ಕೈಗೆ ಕೊಟ್ಟು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್​ ಅವರು ಸ್ವಾಗತಿಸಿದರು.

ಸಚಿವರಾದ ಎಸ್.ಟಿ. ಸೋಮಶೇಖರ್, ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಶಾಸಕರಾದ ಮಸಾಲೆ ಜಯರಾಂ, ಸಿ.ಪಿ.ಯೋಗೀಶ್ವರ್, ರಾಜ್ಯಸಭಾ ಸದಸ್ಯ ಜಗ್ಗೇಶ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಹಾಜರಿದ್ದರು.

ಮುದ್ದಹನುಮೇಗೌಡರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ನಟ ಶಶಿಕುಮಾರ್ ಅವರು ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಬಯಸಿದ್ದು, ಅನಿಲ್ ಕುಮಾರ್ ಅವರು ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಕೈ ಟಿಕೆಟ್​ ತಪ್ಪಿದ್ದಕ್ಕೆ ಮುದ್ದು ಹನುಮೇಗೌಡರು ಅಸಮಾಧಾನಗೊಂಡು ಕಾಂಗ್ರೆಸ್ಸಿನಿಂದ ಅಂತರ ಕಾಯ್ದುಕೊಂಡಿದ್ದರು.

Exit mobile version