Karnataka

ನಿರ್ಬಂಧ ಇಲ್ಲ ಎಂದ ಮಾತ್ರಕ್ಕೆ ರಿವಾಲ್ವರ್ ಅನ್ನು ಕೂಡ ಶಾಲೆಗೆ ತರಬಹುದೇ: ಹಿಜಾಬ್ ಪರ ವಕೀಲರಿಗೆ ಜಡ್ಜ್ ಪ್ರಶ್ನೆ

ಬೆಂಗಳೂರು: ಕಾಲೇಜು ನಿಯಮದಲ್ಲಿ ಹಿಜಾಬ್ ಅನ್ನು ಧರಿಸಬಾರದು ಎಂದು ಎಲ್ಲೂ ಕೂಡ ಉಲ್ಲೇಖಿಸಿಲ್ಲ ಎಂಬ ಹಿಜಾಬ್ ಪರ ವಕೀಲರ ವಾದಕ್ಕೆ ಮರು ಪ್ರಶ್ನೆ ಹಾಕಿದ ತ್ರಿಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು, “ನಿರ್ಬಂಧ ಇಲ್ಲ ಎಂದ ಮಾತ್ರಕ್ಕೆ ರಿವಾಲ್ವರ್ ಅನ್ನು ಕೂಡ ಶಾಲೆಗೆ ತರಬಹುದೇ” ಎಂದು ಕೇಳಿದ ಘಟನೆ ಇಂದಿನ ವಿಜಾರಣೆಯಲ್ಲಿ ನಡೆದಿದೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ತ್ರಿಸದಸ್ಯ ಪೀಠದ ಮುಂದೆ ನಡೆದ ಹಿಜಾಬ್ ಕೇಸಿನ ವಿಚಾರಣೆಯಲ್ಲಿ ಉಡುಪಿ ವಿದ್ಯಾರ್ಥಿಗಳ ಪರ ವಕೀಲರಾದ ರವಿವರ್ಮ ಕುಮಾರ್ ಅವರು, “ಶಿಕ್ಷಣ ಕಾಯ್ದೆಯಾಗಲಿ ಅಥವಾ ಕಾಯ್ದೆಯಡಿಯಲ್ಲಿ ರಚಿಸಲಾದ ನಿಯಮಗಳಲ್ಲಾಗಲಿ ಯಾವುದೇ ಸಮವಸ್ತ್ರವನ್ನು ಸೂಚಿಸಿಲ್ಲ. ಸರ್ಕಾರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಸೂಚಿಸಲು ಸಾಧ್ಯವಿಲ್ಲ.” ಎಂದು ವಾದ ಮಂಡಿಸಿದರು.

ಸೇನೆಯಲ್ಲಿ ಸಿಖ್ಖರು ಟರ್ಬನ್ ಧರಿಸುತ್ತಾರೆ, ಆದರೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಯಾಕೆ ಬೇಡ? ಹಿಜಾಬ್ ಅನ್ನು ನಿಷೇಧಿಸುವುದು ಒಂದು ಕ್ರೂರ ಕ್ರಮವಾಗಿದ್ದು, ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಧಕ್ಕೆ ಉಂಟು ಮಾಡುತ್ತದೆ. ಹಿಜಾಬ್ ವಿವಾದದಿಂದ ಮುಸ್ಲಿಂ ಹುಡುಗಿಯರು ಶಾಲೆಗೆ ಬರುವುದು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವಕೀಲರು ಹೇಳಿದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

Exit mobile version