
ಬೆಂಗಳೂರು: ಹಿಜಾಬ್ ಅಥವಾ ಇನ್ಯಾವುದೇ ವಿಷಯ ಹಿಡಿದು ಹೆಣ್ಣು ಮಕ್ಕಳ ಶಿಕ್ಷಣವನ್ನು ಹಾಲು ಮಾಡದಂತೆ ಮುಸ್ಲಿಂ ಸಮುದಾಯಕ್ಕೆ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿದರು. ನ್ಯಾಯಾಲಯದಿಂದ ಅಂತಿಮ ಆದೇಶ ಬಂದಿದ್ದು ಆ ತೀರ್ಪನ್ನು ಪಾಲಿಸಲೇಬೇಕಾಗಿದೆ. ಈ ವಿವಾದ ಸೃಷ್ಟಿಸಿದ ಕಾಣದ ಕೈಗಳ ಕುರಿತು ಶೀಘ್ರದಲ್ಲೇ ತನಿಖೆಯಾಗಬೇಕು ಎಂದು ಕುಮಾರಸ್ವಾಮಿ ಸರಕಾರವನ್ನು ಆಗ್ರಹಿಸಿದರು.
ನ್ಯಾಯಾಲಯ ಕೂಡ ಹಿಜಾಬ್ ವಿವಾದ ಸೃಷ್ಟಿಸಿದ ಹಿಂದೆ ಕೆಲ ಸಮಾಜಘಾತುಕ ಶಕ್ತಿಗಳ ಕೈವಾಡ ಇದೆ ಎಂಬುದನ್ನು ಹೇಳಿದೆ. ಹಾಗಾಗಿ ಇಂತಹ ಕಾಣದ ಕೈಗಳ ಬಗ್ಗೆ ತನಿಖೆ ಬೇಗನೆ ಮುಗಿಯುವಂತಾಗಬೇಕು. ಆದಷ್ಟು ಬೇಗ ಅಂತಹ ಸಮಾಜ ವಿರೋಧಿ ಶಕ್ತಿಗಳನ್ನು ಪತ್ತೆಹಚ್ಚಿ ಅವರ ಹೆಸರುಗಳನ್ನು ಸರಕಾರ ಬಹಿರಂಗಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ನಾನು ಮುಸ್ಲಿಂ ಸಮುದಾಯದಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ಹೆಣ್ಣು ಮಕ್ಕಳ ಶಿಕ್ಷಣವನ್ನು ಕಸಿಯಬೇಡಿ. ಇದರಿಂದ ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯ ಆಗಿದೆ. ಅದರಲ್ಲೂ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣ ಅತೀ ಮುಖ್ಯ. ಆ ಸಮುದಾಯದಲ್ಲಿ ಬಡತನ ಹೆಚ್ಚಿದೆ. ಅನಕ್ಷರತೆ ಕೂಡ ಹೆಚ್ಚಿದೆ. ಶಿಕ್ಷಣ ಪಡೆದರೆ ಸಾಕ್ಷರರಾಗಿ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಕುಮಾರ ಸ್ವಾಮಿ ಹೇಳಿದರು.












































