
ದಾವಣಗೆರೆ: ಹೊನ್ನಾಳಿ ಚಂದ್ರಶೇಖರ್ ಸಾವಿನ ಬಗ್ಗೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ಪೊಲೀಸ್ ತನಿಖೆ ಬಗ್ಗೆ ರೇಣುಕಾಚಾರ್ಯ, ಹಾಗು ಅವರ ಸಹೋದರ ಗರಂ ಆಗಿದ್ದಾರೆ. “ನಾಲೆಯಲ್ಲಿ ಬಿದ್ದಿದ್ದ ಚಂದ್ರಶೇಖರ್ ಅವರ ಕಾರನ್ನು ಪೊಲೀಸರು ಪತ್ತೆ ಹಚ್ಚಿಲ್ಲ. ಊರ ಜನರು ಪತ್ತೆ ಮಾಡಿದ್ದಾರೆ. ಕಾರು ವೇಗವಾಗಿ ಬಂದು ಅಪಘಾತವಾಗಿದೆ ಎಂದು ಈಗ ಹೇಳುವ ಮೂಲಕ ಪೊಲೀಸರು ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಅವರ ತಮ್ಮ ಎಂ.ಪಿ. ರಮೇಶ್ ನೇರವಾಗಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ. ರಮೇಶ್, ‘ಪೊಲೀಸರು ಸುಳ್ಳು ಕತೆ ಹೇಳುತ್ತಿದ್ದಾರೆ. ಚಂದ್ರಶೇಖರ್ ಮನೆಯಿಂದ ಹೋಗುವಾಗ ಒಳಉಡುಪು ಇತ್ತು. ಆದರೆ, ಶವ ಸಂಸ್ಕಾರ ಮಾಡುವಾಗ ಒಳಉಡುಪು ಇರಲಿಲ್ಲ. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಕಾರಿನ ಹಿಂಭಾಗದ ಇಂಡಿಕೇಟರ್ ಸಹ ಒಡೆದಿದೆ. ಕೈ ಕಟ್ಟಿದ ಸ್ಥಿತಿಯಲ್ಲಿತ್ತು’ ಎಂದು ಆರೋಪಿಸಿದರು.
‘ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ಚಂದ್ರು ಕೊಲೆ ನಡೆದಿರುವುದೂ ಅಷ್ಟೇ ಸತ್ಯ. ನನ್ನ ಸರ್ಕಾರದ ವಿರುದ್ಧ ನಾನೇ ಧ್ವನಿ ಎತ್ತುವುದು ಸರಿಯಲ್ಲ ಎಂದು ಇದುವರೆಗೂ ಸುಮ್ಮನಿದ್ದೆ. ಆದರೆ, ಹೊನ್ನಾಳಿಗೆ ಶುಕ್ರವಾರ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಕುಮಾರ್ ಅವರು ಅತಿವೇಗದ ಅಪಘಾತದಿಂದ ಚಂದ್ರಶೇಖರ್ ಮೃತಪಟ್ಟಿದ್ದಾರೆ ಎಂದು ಅವಸರದ ಹೇಳಿಕೆ ನೀಡಿದ್ದಾರೆ. ಇದು ಅಪಘಾತದಿಂದ ಆದ ಸಾವಲ್ಲ. ಇದೊಂದು ಕೊಲೆ ಪ್ರಕರಣ’ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ ಶಾಸಕ ರೇಣುಕಾಚಾರ್ಯ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ಹೊನ್ನಾಳಿ ಠಾಣೆಗೆ ಹೋಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಕಾರನ್ನು ನೋಡಲು ಬಿಡದೆ ಅಪಘಾತಕ್ಕೀಡಾಗಿದ್ದ ಕಾರನ್ನು ಠಾಣೆಯ ಆವರಣದಲ್ಲಿ ಮುಚ್ಚಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL