
ಬೆಂಗಳೂರು : ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಕ್ರಮಣದಿಂದಾಗಿ ಭದ್ರತಾ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರನ್ನು ವಾಪಸು ರಾಜ್ಯಕ್ಕೆ ಕರೆತರಲು ರಾಜ್ಯ ಸರಕಾರ ಇಂದು ವಿಶೇಷ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಿದೆ.
ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ಅವರನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದ್ದು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಮಾಹಿತಿ ನೀಡಿ ಕೇಂದ್ರ ಸರಕಾರದೊಡನೆ ಸಮನ್ವಯತೆ ಸಾಧಿಸಲು ಸೂಚಿಸಲಾಗಿದೆ. ಕೇಂದ್ರ ಸರಕಾರದ ವಿದೇಶಾಂಗ ಇಲಾಖೆ ಈಗಾಗಲೇ ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗೆ ಸಹಾಯವಾಣಿಯನ್ನು ತೆರೆದಿದ್ದು ಜತೆಗೆ ಇಮೇಲ್ ಸೇವೆಯನ್ನು ಕೂಡ ಆರಂಭಿಸಿದೆ. ಈ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆ ತರಲು ಕಾರ್ಯಪ್ರವೃತ್ತವಾಗಿದೆ. ಇದೀಗ ರಾಜ್ಯದಿಂದ ನೋಡಲ್ ಅಧಿಕಾರಿ ನೇಮಕವಾಗಿರೋದು ಅಫ್ಘಾನ್’ನಲ್ಲಿರೋ ರಾಜ್ಯದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ.
ರಾಜ್ಯದ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವರು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದು ಅವರನ್ನು ಮರಳಿ ರಾಜ್ಯಕ್ಕೆ ಕರೆತರುವ ಕೆಲಸ ಆಗಬೇಕು ಎಂದು ಮಾಜಿ ಸಚಿವ ಕಾಂಗ್ರೆಸ್ಸಿನ ಯು.ಟಿ. ಖಾದರ್ ಇತ್ತೀಚಿಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಇದೀಗ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ಬೆಂಗಳೂರಿನ ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮುಖ್ಯಮಂತ್ರಿಗಳ ಸಲಹೆ ಮೇರೆಗೆ ರಾಜ್ಯಪಾಲ ಥಾವರ್ ಚಾಂದ್ ಗೆಹಲೋಟ್ ಇಂದು ಉಮೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದರು.