Karnataka

ಸಚಿವ ಸಂಪುಟ ವಿಸ್ತರಣೆಯೋ, ಪುನಾರಚನೆಯೋ: ಯಾರಾಗ್ತಾರೆ ಹೊಸ ಮಂತ್ರಿಗಳು

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳಿಗೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ನಡೆಸುವಂತೆ ಹಲವು ಶಾಸಕರುಗಳು ಮುಖಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಕೇವಲ ನಾಲ್ಕು ಮಂದಿಯನ್ನು ಸೇರಿಸಿಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಹಳೆ ಮುಖಗಳಲ್ಲಿ ಕೆಲವರನ್ನು ಕೈ ಬಿಟ್ಟು ಸಚಿವ ಸಂಪುಟ ಪುನಾರಚನೆ ಮಾಡುವುದೋ ಎಂಬ ಗೊಂದಲದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗು ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗಿದೆ.

ಶಾಸಕರುಗಳಾದ ರೇಣುಕಾಚಾರ್ಯ, ಬಸನಗೌಡ ಯತ್ನಾಳ್, ತಿಪ್ಪಾರೆಡ್ಡಿ, ಅಭಯ ಪಾಟೀಲ್, ಬಳ್ಳಾರಿಯ ಸೋಮಶೇಖರ ರೆಡ್ಡಿ, ಸೇಡಂ ಶಾಸಕ ರಾಜಕುಮಾರ್ ಬಹಿರಂಗವಾಗಿಯೇ ತಾವು ಸಚಿವ ಸ್ಥಾನದ ಆಕಾಂಕ್ಷಿಗಳು ಎಂದು ಹೇಳಿಕೊಳ್ಳುತ್ತಿದ್ದು ಉಳಿದ ಶಾಸಕರುಗಳ ಕಣ್ಣು ಕೆಂಪಾಗಿಸಿದೆ. ಸಂಪುಟ ವಿಸ್ತರಣೆಗೆ ಮಾರ್ಚ್ ತನಕ ಕಾಯುವುದು ಬೇಡ. ಆದರೆ ಈಗಲೇ ಆಗಲಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಕೆಲದಿನಗಳ ಹಿಂದೆ ರೇಣುಕಾಚಾರ್ಯ ಭೇಟಿ ಮಾಡಿದ್ದ ಶಾಸಕ ಬಸನಗೌಡ ಯತ್ನಾಳ್ ಇಂದು ರಮೇಶ್ ಜಾರಕಿಹೊಳಿ ಅವರ ಜತೆ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಮೂಲಗಳ ಪ್ರಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಂಪುಟ ಸೇರುವುದು ನಿಶ್ಚಿತವಾಗಿದ್ದು ಉಳಿದಂತೆ ಹೈಕಮಾಂಡ್ ಕೃಪಾಕಟಾಕ್ಷ ತೋರಿದರೆ ವಿಜಯೇಂದ್ರ ಯಡಿಯೂರಪ್ಪ ಕೂಡ ಸಚಿವ ಸಂಪುಟ ಸೇರುವ ಪ್ರಮುಖರಲ್ಲಿ ಸೇರಿದ್ದಾರೆ ಎನ್ನಲಾಗಿದೆ.

ಇನ್ನು ನನಗೆ ಸಚಿವಗಿರಿಗಿಂತ ಪಕ್ಷದ ಕೆಲಸ ಹೆಚ್ಚು ಖುಷಿ ನೀಡುತ್ತದೆ ಎಂದಿರುವ ಕೆ.ಎಸ್ ಈಶ್ವರಪ್ಪ ಹೇಳಿಕೆ ಸಚಿವ ಸಂಪುಟ ಪುನಾರಚನೆಯ ಸುಳಿವು ನೀಡುವಂತಿದೆ. ಈ ಹಿಂದಿನ ನಿರ್ಧಾರಗಳ ಪ್ರಕಾರ ಹಲವು ಹಿರಿಯ ಸಚಿವರನ್ನು ಕೈಬಿಟ್ಟು ಪಕ್ಷದ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬಂದಿತ್ತು. ಈಶ್ವರಪ್ಪ ಅವರ ಇಂದಿನ ಹೇಳಿಕೆ ಆ ಸುದ್ದಿಯನ್ನು ಪುಷ್ಟೀಕರಿಸುವಂತಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಬಿಜೆಪಿಯಲ್ಲಿ ನಾಲ್ಕು ಬಾರಿಯೂ ಮಂತ್ರಿಯಾದವರು ಹೊಸಬರಿಗೆ ಸ್ಥಾನ ಬಿಟ್ಟು ಕೊಡುವ ಸಂದರ್ಭ ಬರಬಹುದು.ಇನ್ನು ಕೆಲ ವಲಸಿಗ ಸಚಿವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೇರುವ ಸೂಚನೆಯಿದ್ದು ಅಂತಹವರನ್ನು ಗುರುತಿಸಿ ಸಂಪುಟದಿಂದ ಕೈ ಬಿಡುವ ಸಾಧ್ಯತೆಯಿದೆ.

ಇನ್ನು ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿಯಿದ್ದು, ಪಕ್ಷದ ವರಿಷ್ಠರು ಯಾವಾಗ ನಿರ್ಧರಿಸುತ್ತಾರೋ ಆಗಲೇ ಸಂಪುಟ ವಿಸ್ತರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇದು ಹಲವು ಶಾಸಕರುಗಳಲ್ಲಿ ಆಸೆಯನ್ನು ಕೆರಳಿಸಿದೆ.

Exit mobile version