
ಬೆಂಗಳೂರು: ನಾಳೆಯ ಒಳಗೆ ಮೈಸೂರು ಅತ್ಯಾಚಾರ ಆರೋಪಿಗಳನ್ನು ಸರ್ಕಾರ ಬಂಧಿಸುವ ಬಗ್ಗೆ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪನವರು, ಆರೋಪಿಗಳ ಬಂಧನಕ್ಕೆ ನಮ್ಮ ಪೊಲೀಸರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು ಖಂಡಿತವಾಗಿ ಅತ್ಯಾಚಾರಿಗಳು ಸಿಕ್ಕೇ ಸಿಗುತ್ತಾರೆ. ಸ್ವತಃ ಗೃಹ ಸಚಿವರು ಹಾಗು ಮುಖ್ಯಮಂತ್ರಿಗಳು ಕೂಡ ವಿಶೇಷ ಪ್ರಯತ್ನದಲ್ಲಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಮುತುವರ್ಜಿ ವಹಿಸಲಾಗುವುದು.
ಗಣೇಶ ಹಬ್ಬ ಕಳೆದ ಬಳಿಕ ರಾಜ್ಯದ ಬಿಜೆಪಿ ಪ್ರಮುಖರೊಡನೆ ಸೇರಿ ರಾಜ್ಯ ಪ್ರವಾಸದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ರಾಜ್ಯ ಪಕ್ಷ ಅಧ್ಯಕ್ಷರೂ ಸೇರಿ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುತ್ತೇವೆ. ನಾನು ಏಕಾಂಗಿಯಾಗಿ ಪ್ರವಾಸ ಹೋಗುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ತನ್ನ ರಾಜ್ಯ ಪ್ರವಾಸ ಕುರಿತ ಪ್ರಶ್ನೆಗೆ ಉತ್ತರಿಸಿದರು.












































