Karnataka

ಕೊರೋನಾ 4ನೇ ಅಲೆಗೆ ಹೊಸ ಮಾರ್ಗಸೂಚಿ: ಜನಜಂಗುಳಿ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ

ಬೆಂಗಳೂರು: ಕೊರೋನಾ 4ನೇ ಅಲೆಯ ಹಿನ್ನಲೆ ಮುನ್ನಚ್ಚೆರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ, ಜನ ಹೆಚ್ಚಿರುವ ಕಡೆ ಮತ್ತು ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಹಾಗು ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಾರ್ವಜನಿಕರು ಹೆಚ್ಚು ಮುಂಜಾಗ್ರತೆ ವಹಿಸಬೇಕಿದೆ. ಲಸಿಕೆ ತೆಗೆದುಕೊಳ್ಳದೇ ಇರುವುದು ಸೋಂಕು ಉಲ್ಬಣಕ್ಕೆ ಕಾರಣವಾಗಿದೆ. ಎಲ್ಲರೂ ಲಸಿಕೆ ಪಡೆಯಬೇಕು. 3ನೇ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಅರ್ಹರಾದವರು ಅದನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ದೇಶದಾದ್ಯಂತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಂದಾಯ ಸಚಿವ ಆರ್. ಅಶೋಕ್, ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆದು ಸಂಭಾವ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಏಪ್ರಿಲ್ 27 ರಂದು ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ರಾಜ್ಯದ ಸಿಎಂಗಳೊಂದಿಗೆ ಸಭೆ ನಡೆಸಲಿದ್ದು, ಅದರ ಅನ್ವಯ ಮುಂದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸದ್ಯಕ್ಕೆ ಮಾಸ್ಕ್ ಧರಿಸದೇ ಇದ್ದರೆ ದಂಡ ಹಾಕಲಾಗುವುದಿಲ್ಲ. ಆದರೆ ಜನರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇಕಡ 1.9 ರಷ್ಟು ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಹೆಚ್ಚು ನಿಗಾ ಇಡಲಾಗಿದೆ. ರಾಜ್ಯದಲ್ಲಿ ಪ್ರತಿದಿನ 10,000 ಕೊರೊನಾ ಟೆಸ್ಟಿಂಗ್ ನಡೆಯುತ್ತಿದೆ ಎಂದು ಸುಧಾಕರ್ ಅವರು ಹೇಳಿದರು.

Exit mobile version