HomeKarnatakaಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ: ಯಡಿಯೂರಪ್ಪ ಜನ್ಮ ದಿನದಂದೇ ಹಲವು ಅಭಿವೃದ್ಧಿ...

ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ: ಯಡಿಯೂರಪ್ಪ ಜನ್ಮ ದಿನದಂದೇ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಶಿವಮೊಗ್ಗ: ಬಿಜೆಪಿಯ ಮೇರು ನಾಯಕ ಬಿ ಎಸ್ ಯಡಿಯೂರಪ್ಪ ಅವರ ೮೦ನೇ ಜನ್ಮ ದಿನದ ಶುಭ ಸಮಯದಲ್ಲಿ ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಭೇಟಿ ನೀಡಿದ್ದು, ಜಿಲ್ಲೆಯ ಸೋಗಾನೆಯಲ್ಲಿ ರೂ.450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ. ಜತೆಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.

ದೆಹಲಿಯಿಂದ ಸೇನಾ ವಿಮಾನದಲ್ಲಿ ಬಂದ ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ನೇರವಾಗಿ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್​, ಶಾಸಕ ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಸೇರಿ ಹಲವರು ನಾಯಕರು ಸ್ವಾಗತಿಸಿದರು.

ವಿಮಾನ ನಿಲ್ದಾಣ ಮಾತ್ರವಲ್ಲದೆ ಪ್ರಧಾನಿ ಮೋದಿಯವರು ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಶಿವಮೊಗ್ಗ ಸ್ಮಾರ್ಟ್​ಸಿಟಿ ಕಾಮಗಾರಿ, ಶಿಮುಲ್​ ಹಾಲು ಪ್ಯಾಕಿಂಗ್​ ಘಟಕ, ಮಾಮ್​​ ಕೋಸ್ ಆಡಳಿತ ಭವನ, ಶಿವಮೊಗ್ಗ-ಶಿಕಾರಿಪುರ, ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ ಶಿಲಾನ್ಯಾಸ ಹಾಗೂ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಶಿಲಾನ್ಯಾಸವನ್ನು ಪ್ರಧಾನಿ ನೆರವೇರಿಸಿದರು.

ಈ ಸಂದರ್ಭ ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ಸನ್ಮಾನ ಮಾಡಿದರು. ಹಸಿರು ಶಾಲು ಹೊದಿಸಿ, ಅಡಕೆ ಹಾರ ಹಾಕಿ, ಪೇಟ ತೊಡಿಸಿ, ನೇಗಿಲು ನೀಡಿ ಸನ್ಮಾನಿಸಿದರು. ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, “ಇಂದು ನನ್ನ ಪಾಲಿನ ಸಾರ್ಥಕತೆಯ ದಿನವಾಗಿದೆ. ಇಂದು ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಮಂತ್ರಿಗಳು ದೇಶವೇ ಮೆಚ್ಚಿದ ಆದರ್ಶ ವ್ಯಕ್ತಿಯಾಗಿದ್ದಾರೆ” ಎಂದು ಹೇಳಿದರು.

“ಕೊಟ್ಟ ಮಾತಿನಂತೆ ಶಿವಮೊಗ್ಗದಲ್ಲಿ ಏರ್​ಪೋರ್ಟ್​ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದಾರೆ. ಈ ದಿನ ಬಹಳ ವೈಶಿಷ್ಟ್ಯಪೂರ್ಣವಾದದ್ದು ಮಲೆನಾಡು ಭಾಗದ ಜನರ ಕನಸು ನನಸಾಗುತ್ತಿರುವ ಶುಭ ಸಂಕೇತ. ಮೋದಿ ಆಶೀರ್ವಾದದಿಂದ ನಾಡಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಇಂತಹ ಅವಕಾಶ ನನಗೆ ಸಿಕ್ಕಿದ್ದಕ್ಕೆ ಜನರಿಗೆ ನಾನು ಋಣಿಯಾಗಿದ್ದೇನೆ.” ಎಂದು ಬಿ ಎಸ್ ವೈ ಸಂತೋಷವನ್ನು ವ್ಯಕ್ತಪಡಿಸಿದರು.

ನಮ್ಮ ವಾಟ್ಸಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ : https://chat.whatsapp.com/CMUDdTXoFVn7atm3zHYGrd

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments