Karnataka

ಇಂದು ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ: ಯಾರು ಈ ಧೀರೋತ್ತಮ ವೀರ?

1857ರಲ್ಲಿ ಭಾರತದ ಮೊದಲ ಸ್ವತಂತ್ರ ಸಂಗ್ರಾಮ ಎಂದೇ ಪರಿಗಣಿಸಲ್ಪಟ್ಟ ಹೋರಾಟ ನಡೆಯುವುದಕ್ಕೂ ಮೊದಲೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಕೆನರಾ ಪ್ರಾಂತ್ಯ) 1837ರಲ್ಲಿಯೇ ಬ್ರಿಟಿಷರ ವಿರುದ್ಧ ಸಾಮೂಹಿಕ ಶಸ್ತ್ರಸಜ್ಜಿತ ಹೋರಾಟ ನಡೆದಿತ್ತು ಅನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ರೈತ ದಂಗೆ ಎಂದೇ ಕರೆಯಲ್ಪಡುವ ಆ ಹೋರಾಟದಲ್ಲಿ ಜಯಗಳಿಸಿ 13 ದಿನಗಳ ಕಾಲ ಈ ಪ್ರಾಂತ್ಯ ಸ್ವತಂತ್ರವಾಗಿತ್ತು ಎನ್ನುವುದು ಮತ್ತೊಂದು ಹೆಮ್ಮೆಯ ವಿಷಯ. 1837ರಲ್ಲಿ ಕೆನರಾ ಮತ್ತು ಕೊಡಗು ಪ್ರಾಂತದಲ್ಲಿ ರೈತರು, ಕೂಲಿಕಾರ್ಮಿಕರು, ಜನಸಾಮಾನ್ಯರನ್ನು ಒಗ್ಗೂಡಿಸಿಕೊಂಡು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಶಸ್ತ್ರಸಜ್ಜಿತ ಹೋರಾಟ ನಡೆಸಿ ಕೆನರಾ ಪ್ರಾಂತವನ್ನು 13 ದಿನಗಳ ಕಾಲ ಸ್ವತಂತ್ರಗೊಳಿಸಿದ ಹೆಗ್ಗಳಿಕೆ ಆ ರೈತ ದಂಗೆಗೆ ಸಲ್ಲುತ್ತದೆ. ಮತ್ತು ಆ ಸಂಪೂರ್ಣ ಹೋರಾಟವನ್ನು ಸಂಘಟಿಸಿ, ಯಶಸ್ವಿಯಾಗಿ ಮುನ್ನಡೆಸಿದ ಧೀರ ಕೆದಂಬಾಡಿ ರಾಮಯ್ಯ ಗೌಡ ಅವರು.

1799ರಲ್ಲಿ ಟಿಪ್ಪು ಸುಲ್ತಾನನ ಅಂತ್ಯದ ಬಳಿಕ ಮಂಗಳೂರು ಮತ್ತು ಸುತ್ತಲಿನ ಪ್ರಾಂತಗಳು ಬ್ರಿಟಿಷ್ ವಸಾಹತುಶಾಹಿಗಳ ಆಡಳಿತಕ್ಕೆ ಒಳಪಟ್ಟಿತ್ತು. ವಸಾಹತುಶಾಹಿ ಆಡಳಿತದಲ್ಲಿನ ಅವೈಜ್ಞಾನಿಕ ಕಂದಾಯ ನಿಗದಿ, ಉಪ್ಪು ಮತ್ತು ಹೊಗೆಸೊಪ್ಪು ಬಗೆಗಿನ ಏಕಸಾಮ್ಯಜನ ಬಗ್ಗೆ ಜನ ಆಕ್ರೋಶಿತರಾಗಿದ್ದರು. ಈ ಆಕ್ರೋಶ 1830ರಲ್ಲಿ ಮಂಗಳೂರು ಕೂಟು ದಂಗೆಗೆ ಕಾರಣವಾಯಿತು. ಈ ಕೂಟು ದಂಗೆ ಮುಂದಿನ 1837ರ ರೈತ ದಂಗೆಗೆ ಸ್ಫೂರ್ತಿ ಹಾಗು ವೇದಿಕೆಯಾಯಿತು. 1837ರ ರೈತ ಹೋರಾಟ ಅತ್ಯಂತ ಶಿಸ್ತು ಬದ್ಧವಾಗಿತ್ತು ಎಂದು ಸ್ವತಃ ಆಗಿನ ಕೆನರಾ ಜಿಲ್ಲೆಯ ಚೀಫ್ ಕಲೆಕ್ಟರ್‌ ಲೆವಿನ್‌ ವರದಿ ಮಾಡಿರುವುದು ಕೆದಂಬಾಡಿ ರಾಮಯ್ಯ ಗೌಡರ ಯೋಜನಾ ಕಲೆ ಹಾಗು ಸಂಘಟನ ಶಕ್ತಿಗೆ ಸಾಕ್ಷಿಯಾಗಿದೆ.

1837ರ ಮಾರ್ಚ್‌ 30ರಂದು ಸಾವಿರಕ್ಕೂ ಹೆಚ್ಚಿನ ರೈತರು, ಕೂಲಿ ಕಾರ್ಮಿಕರು, ಜನ ಸಾಮಾನ್ಯರು ಬಂದೂಕು, ತಲವಾರು, ಬರ್ಚಿ, ಒಡಿಕತ್ತಿ, ಒರೆಕತ್ತಿ ಮುಂತಾದ ಆಯುಧಗಳೊಂದಿಗೆ ಮಿತ್ತೂರು ಗ್ರಾಮದ ಕೆದಂಬಾಡಿ ರಾಮಯ್ಯ ಗೌಡರಿಗೆ ಸೇರಿದ ಗದ್ದೆಯಿಂದ ಹಾಲೇರಿ ಅರಸರ ಸಂಬಂಧಿ ಕಲ್ಯಾಣಸ್ವಾಮಿ ನೇತೃತ್ವದಲ್ಲಿ ಹೊರಟು ಸುಳ್ಯದ ಬೆಳ್ಳಾರೆಯತ್ತ ಸಾಗುತ್ತಾರೆ. ಈ ಸೈನ್ಯವು ಬೆಳ್ಳಾರೆ ಪೇಟೆಯಲ್ಲಿ ಬ್ರಿಟಿಷ್ ಕಂಪೆನಿಯ ಖಜಾನೆಯನ್ನು ವಶಪಡಿಸಿ ಜಯ ಸಾಧಿಸುತ್ತದೆ. ಬೆಳ್ಳಾರೆಯ ಮೊದಲ ಗೆಲುವಿನ ಬಳಿಕ ರೈತ ಸೈನ್ಯವನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ ಮೊದಲ ತಂಡವನ್ನು ಕಾಸರಗೋಡಿನ ಕುಂಬ್ಳೆ, ಕಾಸರಗೋಡು, ಮಂಜೇಶ್ವರ, ಎರಡನೇ ತಂಡವನ್ನು ಬಂಟ್ವಾಳ, ಕಾರ್ಕಳ, ಮೂರನೇ ತಂಡವನ್ನು ಉಪ್ಪಿನಂಗಡಿ, ಬಿಸಿಲೆಗೆ ಕಳುಹಿಸಲಾಗುತ್ತದೆ. ಕಲ್ಯಾಣ ಸ್ವಾಮಿ, ಕೆದಂಬಾಡಿ ರಾಮಯ್ಯ ಗೌಡ ಮತ್ತು ಕುಕ್ಕುನಾಡು ಚೆನ್ನಯ್ಯರನ್ನು ಒಳಗೊಂಡ ಪ್ರಧಾನ ಸೈನ್ಯ ಮಂಗಳೂರಿನ ಕಡೆ ಹೊರಡುತ್ತದೆ. ದಾರಿಯಲ್ಲಿ ಪುತ್ತೂರಿನಲ್ಲಿದ್ದ ಬ್ರಿಟಿಷ್ ಕಂಪೆನಿ ಕಚೇರಿ ಪ್ರಧಾನ ಸೈನ್ಯದ ವಶವಾಗುತ್ತೆ.

ಪುತ್ತೂರು ಕಂಪನಿ ಕಚೇರಿ ವಶಪಡಿಸಿ ಮಂಗಳೂರಿನತ್ತ ಸಾಗಿದ ಸೈನ್ಯವನ್ನು ಬಂಟ್ವಾಳ ನಂದಾವರದ ಲಕ್ಷ್ಮಪ್ಪ ಬಂಗರಸ ತನ್ನ ಸೇನೆಯೊಂದಿಗೆ ಸೇರಿಕೊಳ್ಳುತ್ತಾರೆ. ಸೈನ್ಯ ಮಂಗಳೂರು ನಗರ ತಲುಪುವ ಹೊತ್ತಿಗೆ ಆಗಿನ ಬ್ರಿಟಿಷ್ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಥಳೀಯ ಕಾವಲು ಪಡೆ ಯೋಧರು, ನಗರದ ವ್ಯಾಪಾರಿಗಳು ತಮ್ಮ ಬ್ರಿಟಿಷ್ ನಿಷ್ಠೆ ಬದಲಿಸಿ ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದ ಹೋರಾಟಗಾರರೊಂದಿಗೆ ಕೈ ಜೋಡಿಸುತ್ತಾರೆ. ಮುಂದುವರೆದ ಸೈನ್ಯ ಮಂಗಳೂರು ನಗರದ ಈಗಿನ ಬಾವುಟಗುಡ್ಡೆ ಲೈಟ್‌ ಹೌಸ್‌ ಪ್ರದೇಶಗಳಲ್ಲಿದ್ದ ಬ್ರಿಟಿಷ್‌ ಬಂಗಲೆಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕುತ್ತದೆ. ಲೈಟ್‌ ಹೌಸ್‌ನ ಧ್ವಜಸ್ತಂಭದಲ್ಲಿ ಹಾರಾಡುತ್ತಿದ್ದ ಬ್ರಿಟಿಷ್ ಈಸ್ಟ್‌ ಇಂಡಿಯಾ ಕಂಪೆನಿಯ ಬಾವುಟವನ್ನು ಗುಡ್ಡೆಮನೆ ತಮ್ಮಯ್ಯ ಗೌಡ ಕಿತ್ತೆಸೆದು ರಾಜಲಾಂಛನ ಧ್ವಜ ಹಾರಿಸಿ ಮಂಗಳೂರನ್ನು ವಶಪಡಿಸಿಕೊಂಡಿದ್ದನ್ನು ಸಾರುತ್ತಾರೆ. ನಂತರ ರೈತ ಸೈನ್ಯ ನಗರದ ಖಜಾನೆಯನ್ನು ವಶಪಡಿಸಿಕೊಂಡು, ಜೈಲುಗಳ ಬಾಗಿಲನ್ನು ಒಡೆದು ಅಲ್ಲಿರುವ ಕೈದಿಗಳನ್ನು ಬಿಡುಗಡೆಗೊಳಿಸುತ್ತದೆ.

ರೈತ ಹೋರಾಟಗಾರರಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಗಳನ್ನು ನೋಡಿ ಈಸ್ಟ್ ಇಂಡಿಯಾ ಕಂಪೆನಿಯ ಕ್ಯಾಪ್ಟನ್‌ ಲೆವಿನ್‌ ಸೈನ್ಯ ಮಂಗಳೂರನ್ನು ರಕ್ಷಿಸಲು ಎಪ್ರಿಲ್‌ 2ರಂದು ಮುಂಬಯಿಯಿಂದ ಅಪಾರ ಆಯುಧಗಳೊಂದಿಗೆ ಧಾವಿಸುತ್ತದೆ. ಇತ್ತ ಮಂಗಳೂರನ್ನು ಗೆದ್ದ ರೈತರ ಪ್ರಧಾನ ಸೈನ್ಯ ಮಡಿಕೇರಿಯನ್ನು ವಶಪಡಿಸಲು ಕೂಜುಗೋಡು ಅಪ್ಪಯ್ಯ ಗೌಡ ಮತ್ತು ಕೂಜುಗೋಡು ಮಲ್ಲಪ್ಪ ಗೌಡರ ನೇತೃತ್ವದಲ್ಲಿ ಬಿಸಿಲೆಘಾಟ್ ಮೂಲಕ ರೈತ ಸೈನ್ಯ ಮಡಿಕೇರಿಯ ಕಡೆ ಸಾಗುತ್ತದೆ. ಆ ಹೊತ್ತಿಗೆ ಮುಂಬಯಿಯಿಂದ ಹೆಚ್ಚಿನ ಸೈನ್ಯ, ಮದ್ದುಗುಂಡು, ಬಂದೂಕುಗಳನ್ನು ತರಿಸಿದ ಬ್ರಿಟಿಶ್ ಕಂಪನಿ ಪ್ರತಿ ಹೋರಾಟಕ್ಕೆ ಧುಮುಕುತ್ತದೆ. ಸುಸಜ್ಜಿತವಾಗಿ ಬಂದ ಬ್ರಿಟಿಷ್ ಕಂಪನಿ ಸೇನೆಯಿಂದರೈತ ಹೋರಾಟಗಾರರಿಗೆ ಸೋಲು ಉಂಟಾಗುತ್ತದೆ. ಅಲ್ಲಿಗೆ 13 ದಿನಗಳ ಕಾಲ ಕೆನರಾ ಪ್ರಾಂತ್ರ್ಯ ಅನುಭವಿಸಿದ್ದ ಸ್ವಾತಂತ್ರ್ಯ ಅಂತ್ಯವಾಗುತ್ತದೆ.

1837ರ ರೈತ ಹೋರಾಟದಲ್ಲಿ ಸುಮಾರು 1,115 ರೈತ ಹೋರಾಟಗಾರರನ್ನು ಬಂಧಿಸಲಾಯಿತು. ಕೆಲವರು ಬ್ರಿಟಿಷರಿಗೆ ಸಿಗದೇ ತಪ್ಪಿಸಿಕೊಂಡಿದ್ದರು. ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ನಂದಾವರದ ಲಕ್ಷ್ಮಪ್ಪ ಬಂಗರಸ, ಉಪ್ಪಿನಂಗಡಿಯ ಮಂಜ, ಕಲ್ಯಾಣ ಸ್ವಾಮಿ ವೇಷದಲ್ಲಿದ್ದ ಪುಟ್ಟ ಬಸವನನ್ನು ಮಂಗಳೂರಿನ ನಂತೂರು ಬಳಿಯ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು. ಚಾಣಾಕ್ಷ ನಡೆ ಮೂಲಕ ಹೋರಾಟದ ಸಂಘಟಿಸಿದ್ದ ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ ಸೇರಿದಂತೆ ಹಲವಾರು ಯೋಧರನ್ನು ಬೋನಿನಲ್ಲಿ ತುಂಬಿಸಿ ಸಿಂಗಾಪುರ, ಬರ್ಮಾ ಮುಂತಾದ ದೇಶಗಳಿಗೆ ಸಾಗಿಸಲಾಯಿತು.

1857ರಲ್ಲಿ ನಡೆದ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ಎರಡು ದಶಕಗಳಿಗೂ ಮೊದಲೇ ನಮ್ಮ ಕರಾವಳಿ ನೆಲದಲ್ಲಿ (ಕೆನರಾ ಹಾಗೂ ಕೊಡಗು) ಜನಸಾಮಾನ್ಯರು, ರೈತರು, ಕೂಲಿಕಾರ್ಮಿಕರು ಒಟ್ಟಾಗಿ ಬ್ರಿಟಿಷ್ ವಸಾಹತುಶಾಹಿಗಳಿಗೆ ಮೈ ನಡುಕ ಹುಟ್ಟಿಸಿದ ಹೋರಾಟದ ಚರಿತ್ರೆ ನಿಜಕ್ಕೂ ರೋಚಕ. ಆದರೂ ಈ ಇತಿಹಾಸ ಹತ್ತಿರ ಹತ್ತಿರ ಎರಡು ಶತಮಾನಗಳ ಕಾಲ ಜನರ ಮನಸ್ಸಿನಿಂದ ಮಾಯವಾಗಿತ್ತು. ಅಥವಾ ಈ ಚರಿತ್ರೆಯನ್ನು ಜನರಿಗೆ ತಲುಪಿಸುವ ಪ್ರಯತ್ನಗಳೂ ಆಗಿರಲಿಲ್ಲ. ಆ ಹೋರಾಟವನ್ನು ಸಂಘಟಿಸಿ ಮುನ್ನಡೆಸಿದ ಧೀಮಂತ ವೀರ ಯೋಧ ಕೆದಂಬಾಡಿ ರಾಮಯ್ಯ ಗೌಡರು ಇತಿಹಾಸ ಮರೆತು ಹೋದ ಭಾರತದ ಮೊದಲ ಸ್ವತಂತ್ರ ಹೋರಾಟದ ನಾಯಕ ಎಂಬ ಶ್ರೇಯ ಪಡೆಯಲು ಅರ್ಹರು. ಈ ದಿನ ಕರ್ನಾಟಕ ಸರಕಾರ ಅವರ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪಿಸುವ ಮೂಲಕ ಈ ವೀರ ದೇಶಪ್ರೇಮಿಗೆ ಗೌರವವನ್ನು ಸಲ್ಲಿಸಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version