
ಗದಗ: ಸೂಟ್ ಕೇಸ್ ನೀಡುವ ಸಂಸ್ಕೃತಿ ಜೆಡಿಎಸ್ ಪಕ್ಷದಲ್ಲಿ ಇರಬಹುದು. ಆದರೆ ನಮ್ಮ ಬಿಜೆಪಿಯಲ್ಲಿಲ್ಲ ಎಂದು ಹಿಂದುಳಿದ ವರ್ಗ ಹಾಗು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
‘ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಸೂಟ್ ಕೇಸ್ ಒಯ್ಯಲು ಆಗಾಗ ಬರುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ನಿರಾಧಾರ. ಅರುಣ್ ಸಿಂಗ್ ಅವರು ಪಕ್ಷ ಸಂಘಟನೆಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಸೂಟ್ ಕೇಸ್ ನೀಡುವ ಸಂಸ್ಕೃತಿ ಕುಮಾರಸ್ವಾಮಿ ಅವರ ಪಕ್ಷದಲ್ಲಿ ಇದ್ದಿರಬಹುದು’ ಎಂದು ಕೋಟ ಹೇಳಿದರು.
ಸಿದ್ದರಾಮಯ್ಯ, ಕುಮಾರಸ್ವಾಮಿ ಮುಂತಾದವರ ಟೀಕೆಗಳಿಗೆ ಸೂಕ್ತ ವೇದಿಕೆಯಲ್ಲಿ ಉತ್ತರಿಸಲಾಗುವುದು. ಅವರು ನಮ್ಮ ಸರಕಾರವನ್ನು ಹೊಗಳಬೇಕು ಎಂಬ ಭ್ರಮೆಯಲ್ಲಿ ನಾವಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಬಿಡುಗಡೆ ಹಾಗು ಸಮಾಜ ಕಲ್ಯಾಣ ಇಲಾಖೆಯ ವಸತಿ ಯೋಜನೆಗಳಿಗೆ ಅನುದಾನ ಬಿಡುಗಡೆ ತಡವಾಗಿದೆಯೆಂದು ದೂರುಗಳು ಬಂದಿದ್ದು ಈ ಬಗ್ಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.












































