
ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿಯಿಂದ ನಿರ್ಲ್ಯಕ್ಷಕ್ಕೆ ಒಳಗಾಗಿ ಕಾಂಗ್ರೆಸ್ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ಸಿಗೆ ಹೆಚ್ಚುವರಿ ಸ್ಥಾನ ಬರಲು ಕಾರಣರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಹಾಲಿ ಸಚಿವ ಬೋಸರಾಜು ಹಾಗೂ ತಿಪ್ಪಣ್ಣ ಕಮಕನೂರು ಅವರು ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶೆಟ್ಟರ್ ಅವರು ಹುಬ್ಬಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಶೆಟ್ಟರ್ ಅವರು ಪರಿಷತ್ ಮೂಲಕ ಮತ್ತೆ ವಿಧಾನ ಮಂಡಲ ಪ್ರವೇಶಿಸಿದಂತಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಶಾಸಕರಾದ ಲಕ್ಷ್ಮಣ ಸವದಿ, ಆರ್ ಶಂಕರ್ ಹಾಗೂ ಬಾಬುರಾವ್ ಚಿಂಚನಸೂರ್ ಅವರ ರಾಜೀನಾಮೆಯಿಂದ ತೆರವಾದ ಈ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿತ್ತು. ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 20 ಕೊನೆಯ ದಿನವಾಗಿತ್ತು ಮತ್ತು ನಾಮಪತ್ರ ವಾಪಸ್ ಪಡೆಯಲು ಇಂದು(ಜೂನ್ 23) ಕೊನೆಯ ದಿನವಾಗಿತ್ತು. ವಿಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇಳಿಸಿರಲಿಲ್ಲ.