Karnataka

ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ: ಲಾರಿ ಸಂಪೂರ್ಣ ಭಸ್ಮ

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಅಟ್ಟುಗುಳಿಪುರ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಚಲಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಲಾರಿ ಸಂಪೂರ್ಣವಾಗಿ ಭಸ್ಮವಾದ ಘಟನೆ ನಡೆದಿದೆ. ಲಾರಿಯಲ್ಲಿ ಸಿಮೆಂಟ್ ತುಂಬಿದ ಚೀಲಗಳಿದ್ದು ಲಾರಿ ಸಹಿತ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಸಿಮೆಂಟು ಮೂಟೆಗಳನ್ನು ಹೇರಿಕೊಂಡು ಲಾರಿಯು ತಮಿಳುನಾಡಿನಿಂದ ಮೈಸೂರಿನ ಕಡೆಗೆ ಬರುತ್ತಿತ್ತು. ಚಾಮರಾಜನಗರದ ಅಟ್ಟುಗುಳಿಪುರದ ಬಳಿ ಬಂದಾಗ ಲಾರಿಯ ಇಂಜಿನ್ ಅಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಪೂರ್ತಿಯಾಗಿ ಲಾರಿಯನ್ನು ಆವರಿಸಿದ್ದು ಕ್ಷಣದಲ್ಲಿಯೇ ಲಾರಿ ಸಿಮೆಂಟು ಮೂಟೆಗಳ ಸಹಿತ ಸುಟ್ಟು ಕರಕಲಾಗಿದೆ. ಬೆಂಕಿ ಅರಿವಿಗೆ ಬರುತ್ತಿದ್ದಂತೆ ಲಾರಿಯಲ್ಲಿದ್ದ ಚಾಲಕ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾನೆ. ಹಾಗಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚಾಮರಾಜನಗರ ಅಗ್ನಿಶಾಮಕ ಠಾಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಇಂಜಿನ್ ಅಲ್ಲಿ ಬೆಂಕಿ ಉತ್ಪತ್ತಿಯಾಗಲು ಕಾರಣ ಇನ್ನಷ್ಟೇ ತಿಳಿಯಬೇಕಿದೆ.

Exit mobile version