
ವಿಜಯಪುರ: ನಡೆದಾಡುವ ದೇವರೆಂದೇ ಜನಜನಿತವಾದ, ಶತಮಾನದ ಸಂತ, ದೇಶ ಕಂಡ ಎರಡನೇ ವಿವೇಕಾನಂದ ಎಂದೇ ಪೂಜಿಸಲ್ಪಡುವ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (82) ಇಹಲೋಕ ತ್ಯಜಿಸಿದ್ದಾರೆ. ವಿಶ್ವದೆಲ್ಲೆಡೆ ಇರುವ ಸಿದ್ದೇಶ್ವರ ಶ್ರೀಗಳ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಅರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ ಶ್ರೀಗಳು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಗಿನ ಜಾವದ ಬಳಿಕ ಶ್ರೀಗಳ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಶ್ರೀಗಳ ಅಂತಿಮ ದರ್ಶನ ಪಡೆಯುವುದಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದತ್ತ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.
ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ, ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅವರು ಕರ್ನಾಟಕದ ವಿಜಯಜಪುರದ ಜ್ಞಾನ ಯೋಗಶ್ರಮದ ಸಂಸ್ಥಾಪಕರಾಗಿದ್ದಾರೆ. ಶ್ರೀಗಳವರು ತಮಗೆ ಭಾರತ ಸರ್ಕಾರ ಘೋಷಿಸಿದ್ದ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ಅತ್ಯುನ್ನತ ಪ್ರಶಸ್ತಿಗಳನ್ನು ವಿನಯಪೂರ್ವಕವಾಗಿ ನಿರಾಕರಿಸಿದ್ದರು. ಹಲವು ಗ್ರಂಥಗಳನ್ನು ಬರೆದಿರುವ ಶ್ರೀಗಳ ಉಪನ್ಯಾಸ ಕೇಳಲೆಂದೇ ಲಕ್ಷಾಂತರ ಜನರು ಕೂಡುತ್ತಿದ್ದರು.
ಮಂಗಳವಾರ ಸಂಜೆ 5 ಗಂಟೆಗೆ ಶ್ರೀಗಳವರ ಸಂಕಲ್ಪದ ಪ್ರಕಾರದಂತೆಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೆಲವು ವರ್ಷಗಳ ಹಿಂದೆಯೇ ತಮ್ಮ ಅಂತ್ಯಕ್ರಿಯೆಯ ವಿಧಿವಿಧಾನಗಳ ಬಗ್ಗೆ ಇಚ್ಛೆಯನ್ನು ಸ್ಪಷ್ಟವಾಗಿ ತಿಳಿಸಿದ್ದ ಶ್ರೀಗಳವರು ತಮಗಾಗಿ ಯಾವುದೇ ಸ್ಮಾರಕ ನಿರ್ಮಿಸಬಾರದು ಎಂಬ ಸಂಕಲ್ಪ ಹೊಂದಿದ್ದರು ಎಂದು ಯೋಗಾಶ್ರಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































