Karnataka

ಹರ್ಷ ಕೊಲೆಗೆ ಜೈಲಿನೊಳಗಿಂದ ಬಂದಿತ್ತಾ ಸೂಚನೆ?: ಕೊಲೆಯಾದ ದಿನ ಅನಾಮಿಕ ಹುಡುಗಿಯರಿಂದ ಬಂದಿತ್ತು ಹಲವಾರು ವಿಡಿಯೋ ಕಾಲ್

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ನಂತರದ ಗಲಭೆ ಹಿನ್ನಲೆಯಲ್ಲಿ ಹಾಕಿರುವ ಸೆಕ್ಷನ್ 144 ನಿಷೇಧಾಜ್ಞೆ ಇನ್ನೆರಡು ದಿನ ಮುಂದುವರೆಯಲಿದೆ. ಈ ಮಧ್ಯೆ ಇಂದು ಪೊಲೀಸರು ಡ್ರೋನ್ ಕ್ಯಾಮೆರಾಗಳನ್ನು ಹಾರಿಸಿ ಕಣ್ಗಾವಲು ನಡೆಸಿದರು.

ಭದ್ರತೆಗೆ ಮತ್ತಷ್ಟು ಪೊಲೀಸರ ನಿಯೋಜನೆ ಆಗಿದ್ದು ಕಾರ್ಕಳದ ANF ಕ್ಯಾಂಪ್ ನಿಂದ ನಕ್ಸಲ್ ನಿಗ್ರಹ ದಳ ಆಗಮಿಸಿದೆ. ನಕ್ಸಲ್ ನಿಗ್ರಹ ದಳದ ಪೊಲೀಸರು ಸುಸಜ್ಜಿತ 2 ಡ್ರೋನ್ ಕ್ಯಾಮರಾವನ್ನು ಹಾರಿಸಿ ನಗರದ ಆಗುಹೋಗುಗಳನ್ನು ತಿಳಿಯುವ ಪ್ರಯತ್ನ ಮಾಡಿದರು. ಡ್ರೋನ್ ಕ್ಯಾಮರಾ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತದೆ ಮತ್ತು ಜನರ ಚಲನವಲನ ಮಾಹಿತಿಯನ್ನು ನಿಯಂತ್ರಣ ಕೊಠಡಿಗೆ ನೀಡುತ್ತದೆ.

“ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದ್ದು ಎಲ್ಲವೂ ನಿಯಂತ್ರಣದಲ್ಲಿದೆ. ಅದಕ್ಕಾಗಿ ನಾನು ಜನರಿಗೆ ಧನ್ಯವಾದ ಹೇಳುತ್ತೇನೆ” ಎಂದು ಜಿಲ್ಲಾ ಎಸ್ಪಿ ಹೇಳಿದ್ದಾರೆ.

ಸ್ಪೋಟಕ ಅಂಶ ಬಹಿರಂಗ: ಈ ಮಧ್ಯೆ ಬಂಧಿತರ ಆರಂಭಿಕ ತನಿಖೆಯಲ್ಲಿ ಸ್ಪೋಟಕ ಅಂಶವೊಂದು ಹೊರಬಂದಿದ್ದು ಜೀವಾವಧಿ ಶಿಕ್ಷೆಗೆ ಒಳಗಾಗಿ ಶಿವಮೊಗ್ಗ ಜೈಲಿನಲ್ಲಿರುವ ರೌಡಿ ಸಾಥು ಎಂಬಾತನಿಂದ ಕೊಲೆ ಮಾಡಿದ ಗ್ಯಾಂಗಿಗೆ ಸೂಚನೆ ಹೋಗಿತ್ತು ಎನ್ನಲಾಗಿದೆ. ಜೈಲಿನೊಳಗೆ ಇದ್ದುಕೊಂಡೇ ಖಾಸಿಫ್ ಗ್ಯಾಂಗ್ ಸಂಪರ್ಕ ಸಾಧಿಸಿದ್ದ ರೌಡಿ ನಾಥು ಅಲ್ಲಿಂದಲೇ ಹರ್ಷ ಕೊಲೆಗೆ ಸೂಚನೆ ನೀಡಿದ್ದ ಎನ್ನಲಾಗಿದೆ. ಈ ರೌಡಿ ಸಾಥು ಈ ಹಿಂದೆ ಹಿಂದೂ ಕಾರ್ಯಕರ್ತ ಗೋಕುಲ್ ಎಂಬಾತನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಜೈಲು ಸೇರಿದ್ದ. ತನಿಖೆ ಪ್ರಗತಿಯಲ್ಲಿದ್ದು ಇವನಿಗೆ ಇನ್ಯಾರ ಸಂಪರ್ಕವಿತ್ತು, ಯಾರಿಂದ ಆದೇಶ ಪಡೆಯುತ್ತಿದ್ದ ಎಂಬಿತ್ಯಾದಿ ಮತ್ತಷ್ಟು ವಿವರಗಳು ಹೊರಬೀಳಲಿದೆ.

ಮತ್ತೊಂದೆಡೆ ಇಬ್ಬರು ಅನಾಮಿಕ ಹುಡುಗಿಯರು ಕೊಲೆ ನಡೆದ ದಿನ ಹರ್ಷನಿಗೆ ವಿಡಿಯೋ ಕಾಲ್ ಮಾಡಿ ನಾವು ನಿಮ್ಮ ಫ್ರೆಂಡ್ ಎಂದು ಹೇಳಿ ಹರ್ಷನನ್ನು ಟ್ರಾಪ್ ಮಾಡುವ ಯತ್ನ ಕೂಡ ನಡೆದಿತ್ತು ಎಂಬ ಅಂಶ ಹರ್ಷನ ಗೆಳೆಯರಿಂದ ತಿಳಿದುಬಂದಿದೆ. ಹರ್ಷ ಪದೇ ಪದೇ ಕಾಲ್ ಕಟ್ ಮಾಡುತ್ತಿದ್ದರೂ ಆ ಹುಡುಗಿಯರು ಮತ್ತೆ ಮತ್ತೆ ಕಾಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ರೀತಿ ಕೊಲೆ ನಡೆದ ಹಿಂದಿನ 2-3 ದಿನಗಳಿಂದ ಆ ಇಬ್ಬರು ಹುಡುಗಿಯರಿಂದ ಕರೆ ಬರುತ್ತಿತ್ತು ಎಂದು ತಿಳಿದುಬಂದಿದೆ. ನಾವು ತುಂಬಾ ಕಷ್ಟದಲ್ಲಿದ್ದೇವೆ ನಿಮ್ಮ ಸಹಾಯ ಬೇಕು ಎಂದು ಆ ಹುಡುಗಿಯರು ಹರ್ಷನಿಗೆ ಹೇಳಿದ್ದರು ಎನ್ನಲಾಗಿದೆ. ಬಹುಶ ಆ ಹುಡುಗಿಯರು ಹರ್ಷನನ್ನು ಇಂತಹ ಜಾಗಕ್ಕೆ ಬರಲು ಹೇಳಿದ್ದಾರೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದೆ. ಆ ಫೋನ್ ಕಾಲ್ ನಂತರ ಕೆಲವೇ ನಿಮಿಷಗಳಲ್ಲಿ ಹರ್ಷನ ಕೊಲೆಯಾಗಿತ್ತು ಎಂದು ಗೆಳೆಯರಿಂದ ಮಾಹಿತಿ ಸಿಕ್ಕಿದೆ.

ಅಲ್ಲದೆ 2-3 ವಾರಗಳಿಂದ ಮೂರು ಮಂದಿ ಮಟನ್ ಅಂಗಡಿಯ ಬಳಿ ಹರ್ಷನ ಚಲನವಲನಗಳನ್ನು ಗಮನಿಸುತ್ತಿದ್ದುದು ಕೂಡ ಹರ್ಷನ ಗಮನಕ್ಕೆ ಬಂದಿತ್ತು ಎನ್ನಲಾಗಿದೆ. ಈ ಬಗ್ಗೆ ಹರ್ಷನ ಸ್ನೇಹಿತರೂ ಕೂಡ ಹರ್ಷನನ್ನು ಎಚ್ಚರಿಸಿದ್ದರು ಎನ್ನಲಾಗಿದೆ. ಮತ್ತೊಂದು ಸ್ಪೋಟಕ ಮಾಹಿತಿ ಬಂದಿದ್ದು ಹರ್ಷನ ಮೊಬೈಲ್ ಫೋನ್ ಕೂಡ ಕೊಲೆಯಾದ ಸ್ಥಳದಲ್ಲಿ ಸಿಕ್ಕಿಲ್ಲ. ಫೋನ್ ಅನ್ನು ಆರೋಪಿಗಳೇ ತೆಗೆದುಹೋಗಿರುವ ಸಾಧ್ಯತೆ ಇದೆ.

(ಗುಣಮಟ್ಟದ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್ ಅಲ್ಲಿ ಪಡೆಯಲು ನಮ್ಮ ವಾಟ್ಸಾಪ್ ಗುಂಪಿಗೆ ಸೇರಿರಿ. ಲಿಂಕ್ : https://chat.whatsapp.com/GcMFEE9n0iP0mgfzL9qqyH )

Exit mobile version