
ನವದೆಹಲಿ: ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್‌ನ (ಐಸಿಸ್ ) ಚಟುವಟಿಕೆಗಳನ್ನು ಹೆಚ್ಚಿಸುವ ಸಲುವಾಗಿ ಶಿವಮೊಗ್ಗ ಬಾಂಬ್ ಸ್ಫೋಟ ಟೆಸ್ಟಿಂಗ್ ಹಾಗು ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಭಯೋತ್ಪಾದಕರನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ತಿಳಿಸಿದೆ.
ಮಂಗಳೂರಿನ ಉಳ್ಳಾಲದ ಬಬ್ಬುಕಟ್ಟೆ ನಿವಾಸಿ ಮಜಿನ್ ಅಬ್ದುಲ್ ರಹಮಾನ್ ಮತ್ತು ಹೊನ್ನಾಳಿಯ ನದೀಮ್ ಅಹ್ಮದ್ ಕೆಎ ಎಂಬ ಇಬ್ಬರು ಐಸಿಸ್ ಉಗ್ರರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇತರ ನಾಲ್ವರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಒಟ್ಟು ಬಂಧಿತರ ಸಂಖ್ಯೆ ೬ ಕ್ಕೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಪಿಎ ಇಂಜಿನಿಯರಿಂಗ್ ಕಾಲೇಜಿನ ಓರ್ವ ವಿದ್ಯಾರ್ಥಿಯನ್ನು ಇದೇ ಪ್ರಕರಣದಲ್ಲಿ ಬಂಧಿಸಿತ್ತು.
ಕಳೆದ ವರ್ಷ ಸೆಪ್ಟೆಂಬರ್ 19 ರಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಾಂಬ್ ಸ್ಫೋಟ ಪರೀಕ್ಷೆ ಕುರಿತಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಉಗ್ರ ಚಟುವಟಿಕೆಯ ವಾಸನೆ ಬಂದ ಹಿನ್ನಲೆಯಲ್ಲಿ ಕಳೆದ ವರ್ಷ ನವೆಂಬರ್ 4 ರಂದು ಎನ್ಐಎ ತನಿಖೆಯನ್ನು ವಹಿಸಿಕೊಂಡಿತ್ತು.
ಉಗ್ರ ಮಾಜ್ ಮುನೀರ್ ಎಂಬಾತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ನಿವಾಸಿಯಾದ ಮಜಿನ್ ಅಬ್ದುಲ್ ರಹಮಾನ್ ಎಂಬಾತನನ್ನು ಉಗ್ರಗಾಮಿಯನ್ನಾಗಿ ಮಾಡಿ ನೇಮಕಾತಿ ಮಾಡಿಕೊಂಡಿದ್ದ. ಮತ್ತೋರ್ವ ಆರೋಪಿ ಸೈಯದ್ ಯಾಸಿನ್ ದಾವಣಗೆರೆ ಮೂಲದ ನದೀಮ್ ಅಹ್ಮದ್‌ನನ್ನು ಉಗ್ರಗಾಮಿಯನ್ನಾಗಿ ಮಾಡಿ ಕೆಲಸಕ್ಕೆ ಸೇರಿಸಿಕೊಂಡಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.
ಈ ಉಗ್ರರು ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಚಟುವಟಿಕೆಗಳನ್ನು ಮುಂದುವರಿಸಲು ಸಚಿನ ಭಾಗವಾಗಿ ಭಾಗವಾಗಿ ವಿಧ್ವಂಸಕ ಕೃತ್ಯಗಳಿಗೆ ಪ್ರಯತ್ನಿಸಿದ್ದರು. ಮಂಗಳೂರಿನ ಕುಕ್ಕರ್ ಬಾಂಬ್ ಹಠಾತ್ ಸ್ಫೋಟ ಪ್ರಕರಣವೂ ಇದರದೇ ಮುಂದುವರೆದ ಸರಪಳಿಯಾಗಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































