Karnataka

ಉಡುಪಿ ಹಿಜಾಬ್ ಬಳಿಕ ಕೋಲಾರ ಶಾಲೆಯಲ್ಲಿ ಸಾಮೂಹಿಕ ನಮಾಜ್ ವಿವಾದ: ಹಿಂದೂಗಳಿಂದ ಪ್ರತಿಭಟನೆ

ಕೋಲಾರ: ಉಡುಪಿಯ ಸರ್ಕಾರೀ ಕಾಲೇಜಿನಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ನಿಯಮ ಮೀರಿ ಹಿಜಾಬ್ ಧರಿಸಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈಗ ಮತ್ತೆ ಇಂತಹುದೇ ಘಟನೆಯೊಂದು ಕೋಲಾರದಲ್ಲಿ ಘಟಿಸಿದೆ. ಸರ್ಕಾರಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿ ಶುಕ್ರವಾರ ನಮಾಜ್ ಮಾಡಲು ಅವಕಾಶ ನೀಡಿದ್ದು ಈಗ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಕೋಲಾರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಸುಮಾರು ಇಪ್ಪತ್ತು ವಿದ್ಯಾರ್ಥಿಗಳಿಗೆ ಪ್ರತಿ ಶುಕ್ರವಾರ ತರಗತಿಯಲ್ಲಿ ನಮಾಜ್ ಮಾಡಲು ಮುಖ್ಯೋಪಾಧ್ಯಾಯಿನಿ ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸ್ಥಳೀಯ ಹಿಂದೂ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು ಶಾಲೆಯಲ್ಲಿ ನಮಾಜ್ ಆಚರಣೆಗೆ ಕಡಿವಾಣ ಹಾಕಲಾಗಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಉಮೇಶ್ ಕುಮಾರ್ ಅವರು ಮುಳಬಾಗಲು ಸೋಮೇಶ್ವರ ಪಾಳೆಯ ಬಳೆ ಚಂಗಪ್ಪ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯವೈಖರಿ ಕುರಿತು ತನಿಖೆ ನಡೆಸಿ ವಿವರವಾದ ವರದಿ ನೀಡುವಂತೆ ಆದೇಶಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರೇವಣ ಸಿದ್ದಪ್ಪ ಅವರು ಶಾಲೆಗೆ ಭೇಟಿ ನೀಡಿ, ವಿಚಾರಣೆ ನಡೆಸಿ ವರದಿ ಸಲ್ಲಿಸುವ ಹೊಣೆ ಹೊತ್ತಿದ್ದಾರೆ.

ಎರಡು ತಿಂಗಳ ಹಿಂದೆ ಶಾಲೆ ಪುನರಾರಂಭವಾದಾಗಿನಿಂದ ನಾವು ಶಾಲೆಯಲ್ಲಿ ನಮಾಜ್ ಮಾಡುತ್ತಿದ್ದೇವೆ. ಶಾಲಾ ಮುಖ್ಯೋಪಾಧ್ಯಾಯಿನಿ ಅನುಮತಿ ನೀಡಿದ್ದಾರೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಮುಖ್ಯೋಪಾಧ್ಯಾಯಿನಿ ಉಮಾದೇವಿ ಅವರಲ್ಲಿ ಕೇಳಿದಾಗ, “ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಅದನ್ನು ಮಾಡಿಲ್ಲ. ವಿದ್ಯಾರ್ಥಿಗಳು ಅದನ್ನು ಸ್ವತಃ ಮಾಡಿದರು. ಇದು ಸಂಭವಿಸಿದಾಗ ನಾನು ಇಲ್ಲಿ ಇರಲಿಲ್ಲ. ಎಜುಕೇಶನ್ ಆಫೀಸರ್ ಫೋನ್ ಮಾಡಿ ಶಾಲೆಯಲ್ಲಿ ಹೀಗಾಗುತ್ತಿದೆ ಎಂದಾಗ ನಾನು ಶಾಲೆಗೆ ಧಾವಿಸಿದೆ.” ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಳಬಾಗಿಲು ಶಾಸಕರಾದ ಎಚ್ ನಾಗೇಶ್, ಶಾಲೆಯಲ್ಲಿ ಮುಸ್ಲಿಂ ಸಮುದಾಯದ ಮಕ್ಕಳ ಪ್ರಾರ್ಥನೆಗೆ ಅವಕಾಶ ನೀಡಿದ ವಿಚಾರ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಕೂಲಕುಂಶವಾಗಿ ತನಿಖೆ ನಡೆಸಿ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಾಸಕ ನಾಗೇಶ್ ಸೂಚನೆ ನೀಡಿದ್ದಾರೆ.

ಸದ್ಯಕ್ಕೆ ಶಾಲೆಯಲ್ಲಿ ನಮಾಜಿಗೆ ಕಡಿವಾಣ ಬಿದ್ದಿದ್ದು ತನಿಖೆ ಮುಂದುವರೆದಿದೆ.

Exit mobile version