Karnataka

ರಾಜ್ಯ ಸರ್ಕಾರದ ಆಪ್ತ ಖ್ಯಾತಿಯ ‘ಸ್ಯಾಂಟ್ರೋ ರವಿ’ ಗುಜರಾತಿನಲ್ಲಿ ಅರೆಸ್ಟ್: ವೇಷ ಮರೆಸಿಕೊಂಡಿದ್ದ ಪಿಂಪ್

ಮೈಸೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಜುಗರ ತರಿಸಿದ್ದ ಅನೈತಿಕ ದಂಧೆ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಸ್ಯಾಂಟ್ರೋ ರವಿ ವೇಷ ಮರೆಸಿಕೊಂಡು ಗುಜರಾತಿನಲ್ಲಿ ಅಡಗಿ ಕುಳಿತಿದ್ದ ಮಾಹಿತಿ ಪಡೆದ ರಾಜ್ಯ ಪೊಲೀಸರು ಅಹಮಾದಾಬಾದ್’ನಲ್ಲಿ ಬಂಧಿಸಿದ್ದಾರೆ.

ಸ್ಯಾಂಟ್ರೋ ರವಿ ಅಲಿಯಾಸ್ ಪಿಂಪ್ ರವಿ ಬಂಧನ ಕುರಿತು ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸುವ್ಯವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, “ಕಳೆದ 11 ದಿನಗಳಿಂದ ರಾಜ್ಯ ಪೊಲೀಸರಿಗೆ ಸಿಗದೇ ತಪ್ಪಿಸಿಕೊಂಡಿದ್ದ ಸ್ಯಾಂಟ್ರೋ ರವಿ ಸೇರಿ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಸ್ಯಾಂಟ್ರೋ ರವಿ, ರಾಮ್ ಜಿ, ಸತೀಶ್, ಹಾಗು ಮಧುಸೂದನ್ ಬಂಧಿತ ಆರೋಪಿಗಳಾಗಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ವೇಷ ಮರೆಸಿ ಮೊಬೈಲ್ ಕಾರು ಬದಲಾಯಿಸಿ ಓಡಾಡುತ್ತಿದ್ದ ರವಿಯನ್ನು ಕಂಡು ಹಿಡಿಯುವುದು ತ್ರಾಸದಾಯಕವಾಗಿತ್ತು. ನಿನ್ನೆ ದಿನ ಮಂತ್ರಾಲಯದಲ್ಲಿ ಸ್ಯಾಂಟ್ರೋ ರವಿ ಆಪ್ತನನ್ನು ಬಂಧಿಸಲಾಗಿತ್ತು. ಆತನಿಂದ ದೊರೆತ ಮಾಹಿತಿ ಪ್ರಕಾರ ಗುಜರಾತ್ ಗೆ ತೆರಳಿದ ವಿಶೇಷ ತಂಡ ಸ್ಯಾಂಟ್ರೋ ರವಿಯನ್ನು ಪತ್ತೆ ಹಚ್ಚಿ ಬಂಧಿಸಿದೆ.

“ತನ್ನ ಮೇಲೆ ಪ್ರಕರಣ ದಾಖಲಾದ ಬಳಿಕ ರಾಜ್ಯದ ಹಲವೆಡೆ ಕಾರಿನಲ್ಲಿ ಸುತ್ತಾಡಿದ್ದ ರವಿ, ನಂತರ ಗುಜರಾತ್ ಗೆ ತೆರಳಿ ವೇಷ ಬದಲಿಸಿಕೊಂಡಿದ್ದ. ಪ್ರತಿ ದಿನ ಜಾಗ ಹಾಗೂ ಮೊಬೈಲ್ ಸಿಮ್ ಬದಲಾಯಿಸುತ್ತಿದ್ದರಿಂದ ಆತನ ಬಂಧನ ತಡವಾಗಿತ್ತು.ರವಿ ಬಂಧನಕ್ಕಾಗಿ ಮಂಡ್ಯ, ಮೈಸೂರು, ರಾಮನಗರ ಎಸ್ ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡ ಗುಜರಾತ್ ಪೊಲೀಸರ ನೆರವಿನಿಂದ ಇಂದು ಮಧ್ಯಾಹ್ನ ಆರೋಪಿಯನ್ನು ಬಂಧಿಸಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

ಹೆಣ್ಣು ಮಕ್ಕಳನ್ನು ಸರಬರಾಜು ಮಾಡುವ ಸ್ಯಾಂಟ್ರೋ ರವಿ ಸರಕಾರಿ ಅತಿಥಿ ಗೃಹದಲ್ಲಿ ಮೊಕ್ಕಾಂ ಹೂಡಿರುವುದು, ರಾಜ್ಯ ಬಿಜೆಪಿ ಸರಕಾರದ ಹಲವು ಸಚಿವರೊಂದಿಗೆ ಆತ್ಮೀಯನಾಗಿರುವ ಫೋಟೋಗಳೆಲ್ಲ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಒಂದರ ಮೇಲೆ ಒಂದರಂತೆ ಆರೋಪ ಎದುರಿಸುತ್ತಿದ್ದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಈ ಪ್ರಕರಣ ಚುನಾವಣಾ ಹೊಸ್ತಿಲಲ್ಲಿ ಭಾರೀ ಡ್ಯಾಮೇಜ್ ಮಾಡಿತ್ತು. ಸ್ಯಾಂಟ್ರೋ ರವಿ ಬಂಧನದ ಬಳಿಕ ಪ್ರತಿಕ್ರಿಯಿಸಿರುವ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, “ಸ್ಯಾಂಟ್ರೋ ರವಿ ಬಂಧನದೊಂದಿಗೆ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲಾಗಿದೆ” ಎಂದು ಹೇಳಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version