
ಬೆಂಗಳೂರು: ಮಂಗಳೂರು ಬಾಂಬ್ ಸ್ಫೋಟ (ಕುಕ್ಕರ್ ಬಾಂಬ್) ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ ಕಳೆದ ಕೆಲ ತಿಂಗಳುಗಳ ಅವಧಿಯಲ್ಲಿ ಕರ್ನಾಟಕ ಸೇರಿದಂತೆ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ರಾಜ್ಯಗಳ ಗಡಿ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ದಕ್ಷಿಣ ಭಾರತದ ಕಾಡಿನಲ್ಲಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಪ್ರಾಂತ್ಯ ಸ್ಥಾಪಿಸಲು ಸಿದ್ಧತೆ ನಡೆಸಿದ್ದಎಂಬ ಸ್ಫೋಟಕ ಅಂಶ ಬಹಿರಂಗವಾಗಿದೆ.
ಅಲ್-ಹಿಂದ್ ಸಂಘಟನೆಗೆ ಸೇರಿದ ಸದ್ಯ ತಲೆಮರೆಸಿಕೊಂಡಿರುವ ತೀರ್ಥಹಳ್ಳಿಯ ಮೊಹಮ್ಮದ್ ಮತೀನ್ ತಾಹಾ ದಕ್ಷಿಣ ಭಾರತದ ಕೆಲ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದ. ಆ ವೇಳೆ ಶಾರೀಕ್ ಕೂಡ ಜತೆಗೆ ಹೋಗಿದ್ದ. ಮುಂದೆ ಮತೀನ್ ವಿರುದ್ಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು, ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಶೋಧಿಸಲು ಆರಂಭಿಸಿದಾಗ ತಲೆಮರೆಸಿಕೊಂಡಿದ್ದ. ಆಗ ಆತನ ಯೋಜನೆಗಳು ಅರ್ಧಕ್ಕೆ ನಿಂತಿತ್ತು. ಹೀಗಾಗಿ ಶಾರೀಕ್‌ಗೆ ನಾಲ್ಕು ರಾಜ್ಯಗಳಲ್ಲಿ ಓಡಾಟ ನಡೆಸಲು ಮತೀನ್ ಸೂಚಿಸಿದ್ದ ಎಂಬುದು ತಿಳಿದು ಬಂದಿದೆ.
ತುಂಗಾ ನದಿ ತೀರದಲ್ಲಿ ಸುಧಾರಿತಾ ಸ್ಫೋಟಕ ಸಾಧನ ತಯಾರಿಕೆ ಮತ್ತು ಸ್ಫೋಟ ಪರೀಕ್ಷೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಮತೀನ್ ಸೂಚನೆ ಮೇರೆಗೆ ಕರ್ನಾಟಕದ ಬಂಡೀಪುರ, ಕೋಲಾರ, ಕೊಡಗು, ಕೇರಳದ ಕಣ್ಣೂರು, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿರುವ ಒಟ್ಟು ಐದಾರು ಅರಣ್ಯ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮತೀನ್‌ಗೆ ಈ ಶಾರಿಕ್ ಟೆಲಿಗ್ರಾಂ ಮೂಲಕ ಕಳುಹಿಸಿದ್ದ. ಒಂದೊಂದು ಪ್ರದೇಶದಲ್ಲಿ 50ರಿಂದ 100 ಮಂದಿ ಉಗ್ರರು ಕಾರ್ಯನಿರ್ವಹಿಸುವಂತೆ ಮಾಡುವುದು ಈ ಸಂಘಟನೆ ಉದ್ದೇಶವಾಗಿತ್ತು. ಅಲ್ಲಿಯೇ ತರಬೇತಿ ನೀಡಿ ವಿಧ್ವಂಸಕ ಕೃತ್ಯಗಳು ಮತ್ತು ಹಿಂದೂ ಮುಖಂಡರು ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿಗೆ ಸಂಚು ರೂಪಿಸಲಾಗಿತ್ತು. ಹೀಗಾಗಿ ಶಾರೀಕ್ ಹಿಂದೂ ಧಾರ್ಮಿಕ ಕೇಂದ್ರ ಮತ್ತು ಹಿಂದೂ ಮುಖಂಡರು ಹೆಚ್ಚು ಸಕ್ರಿಯವಾಗಿರುವ ಪ್ರದೇಶಗಳ ಸಮೀಪದಲ್ಲಿರುವ ಅರಣ್ಯ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವುಗಳ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ಟೆಲಿಗ್ರಾಂ ಮತ್ತು ಇತರೆ ಡಾರ್ಕ್‌ವೆಬ್ ಆಧಾರಿತ ಸಂವಹನ ಆಪ್ ಮೂಲಕ ಕಳುಹಿಸಿದ್ದ.
ಇದೀಗ ಶಾರೀಕ್ ನ ಮೊಬೈಲ್ ಅನ್ನು ಸಂಪೂರ್ಣವಾಗಿ ರಿಟ್ರೈವ್ ಮಾಡಲಾಗುತ್ತಿದೆ. ಇಸ್ಲಾಮಿಕ್ ಸ್ಟೇಟ್‌ನ ಸದಸ್ಯರು ಕೋಲಾರ, ಕೊಡಗು, ಶಿವನಸಮುದ್ರ ಮತ್ತು ತಮಿಳುನಾಡಿನ ರತ್ನಗಿರಿ ಕಾಡಿನಲ್ಲಿ ಸ್ಥಳ ಗುರುತಿಸಿ, ಶಸ್ತ್ರಾಸ್ತ್ರ ತರಬೇತಿಗೆ ಸಿದ್ದತೆ ನಡೆಸಿದ್ದರು ಎಂಬುದು ಕೂಡ ಬಯಲಾಗಿದೆ.