
ಬೆಂಗಳೂರು: ಹೆತ್ತ ತಾಯಿಯೇ ತನ್ನ 4 ವರ್ಷದ ಮಗುವನ್ನು ಗೋವಾದ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಕೊಂದು ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಬಂಧಿಸಲ್ಪಟ್ಟ ಪಶ್ಚಿಮ ಬಂಗಾಳ ಮೂಲದ ಸುಚನಾ ಸೇಠ್ ಕುರಿತು ಶಾಕಿಂಗ್ ವಿಚಾರ ಹೊರಬಿದ್ದಿದೆ. ತನ್ನ ಮಗನ ಮುಖನ ನೋಡುವ ಪತಿಯ ನೆನಪು ಬರುತ್ತಿದ್ದುದೇ ಪುಟ್ಟ ಮಗುವಿನ ಕೊಲೆಗೆ ಕಾರಣ ಎಂದು ಬಹಿರಂಗಗೊಂಡಿದೆ.
ಸುಚನಾ ಸೇಠ್ ಅಪಾರ್ಟ್‌ಮೆಂಟ್‌ನಲ್ಲಿ ಪುಟ್ಟ ಕಂದನನ್ನು ಕೊಂದು ಶವವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಗೋವಾದಿಂದ ಕರ್ನಾಟಕದತ್ತ ಬರುವಾಗ ಚಿತ್ರದುರ್ಗದ ಬಳಿ ಪೊಲೀಸರಿಗೆ ಸೆರೆ ಸಿಕ್ಕಿದ್ದಳು. 39 ವರ್ಷದ ಮಹಿಳೆ ತನ್ನ ವಿಚ್ಛೇದಿತ ಪತಿ ತಮ್ಮ ಮಗುವನ್ನು ಭೇಟಿಯಾಗದಂತೆ ತಡೆಯಲು ಈ ಹೇಯ ಕೃತ್ಯ ಎಸಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯ ಆಧಾರದಲ್ಲಿ ಪೊಲೀಸರು ತಿಳಿಸಿದ್ದಾರೆ.
ಸುಚನಾ ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈಕೆ ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸ್ಥಾಪಕಿ ಮತ್ತು ಸಿಇಒ ಆಗಿ ಕಳೆದ ನಾಲ್ಕು ವರ್ಷಗಳಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾಳೆ. 2021 ರ ಎಐ ಎಥಿಕ್ಸ್‌ನಲ್ಲಿ ಟಾಪ್ 100 ಬ್ರಿಲಿಯಂಟ್ ಮಹಿಳೆಯರಲ್ಲಿ ಈಕೆಯೂ ಒಬ್ಬಳಾಗಿದ್ದಾಳೆ.
ಮಗುವಿನ ಮುಖದ ಚಹರೆ ತನ್ನ ಪತಿಯ ಮುಖವನ್ನೇ ಹೋಲುತ್ತದೆ ಎಂದು ಮಹಿಳೆ ತನ್ನ ಸ್ನೇಹಿತರೊಂದಿಗೆ ಹಲವು ಬಾರಿ ಹೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಆತನನ್ನು ನೋಡಿದಾಗಲೆಲ್ಲಾ ನನಗೆ ನನ್ನ ಪತಿಯ ಮುಖ ಮತ್ತು ನಮ್ಮಿಬ್ಬರ ನಡುವಿನ ಹಳೆಯ ಸಂಬಂಧ ನೆನಪಿಗೆ ಬರುತ್ತದೆ ಎಂದು ಸುಚನಾ ಹೇಳಿಕೊಂಡಿದ್ದಳು. ಇದೇ ಮಗುವಿನ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.












































