
ಬೆಂಗಳೂರು: ರಾಜ್ಯದಲ್ಲಿ ಅಲ್ಲಾಹನಿಗೆ ಸಮರ್ಪಿತವಾದ ‘ಹಲಾಲ್’ ಮಾಂಸವನ್ನು ಹಿಂದೂಗಳು ಬಹಿಷ್ಕರಿಸುವ ಘಟನೆಗಳ ಬೆನ್ನಲ್ಲೇ ಈ ಬಗ್ಗೆ ಬೆಂಬಲ ಸೂಚಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಲಾಲ್ ಆಹಾರ ಎಂಬುದು ಆರ್ಥಿಕ ಜಿಹಾದ್ ಆಗಿದ್ದು ಅದನ್ನು ಬಹಿಷ್ಕರಿಸುವ ಹಕ್ಕು ನಮಗಿದೆ ಎಂದಿದ್ದಾರೆ.
ಹಿಂದೂ ಜನ ಜಾಗೃತಿ ಸಮಿತಿಯ ಮೋಹನ್ ಗೌಡ ಅವರು ಇತ್ತೀಚಿಗೆ ಹಿಂದೂ ಹೊಸ ವರ್ಷವಾದ ಯುಗಾದಿಯಂದು ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು, ಮುಖಂಡರುಗಳು ಹಲಾಲ್ ಬಹಿಷ್ಕಾರ ಅಭಿಯಾನವನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯಿದ್ದಾರೆ.
ಹಲಾಲ್ ಒಂದು ಆರ್ಥಿಕ ಜಿಹಾದ್ ಅಂದರೆ ಮುಸಲ್ಮಾನರು ಬೇರೆಯವರೊಂದಿಗೆ ವ್ಯಾಪಾರ ಮಾಡಬಾರದು,ಮುಸ್ಲಿಮರಲ್ಲದವರಿಗೆ ಕೆಲಸ ನೀಡಬಾರದು ಎಂದು ಜಿಹಾದ್ ರೀತಿಯಲ್ಲಿ ಬಳಸುತ್ತಾರೆ. ಹಿಂದೂಗಳು ಕೂಡ ಅಲ್ಲಾಹನಿಗೆ ಸಮರ್ಪಿತವಾದ ಹಲಾಲ್ ಮಾಂಸವನ್ನೇ ಬಳಸಬೇಕು ಎಂದೆನಿಸಿದಾಗ ಅದು ಬೇಡ ಎಂದು ಹೇಳುವುದರಲ್ಲಿ ತಪ್ಪೇನಿದೆ. ಮುಸ್ಲಿಮರು ಹಿಂದೂಗಳಿಂದ ಮಾಂಸವನ್ನು ಖರೀದಿಸಲು ನಿರಾಕರಿಸಿದಾಗ, ಅವರಿಂದ ಖರೀದಿಸಲು ಹಿಂದೂಗಳನ್ನು ಏಕೆ ಒತ್ತಾಯಿಸಬೇಕು? ಇದನ್ನು ಕೇಳಲು ಅವರಿಗೆ ಏನು ಹಕ್ಕಿದೆ ಎಂದು ಸಿಟಿ ರವಿ ಹೇಳಿದ್ದಾರೆ.
ಮುಸ್ಲಿಂರು ಅಲ್ಲಾಹನಿಗೆ ಅರ್ಪಿಸುವ ಹಲಾಲ್ ಮಾಂಸವು ಅವರಿಗೆ ಪ್ರಿಯವಾಗಿದೆ. ಆದರೆ ಹಿಂದೂಗಳಿಗೆ ಅದು ಯಾರದೋ ಎಂಜಲು ತಿನ್ನುವಂತಾಗುತ್ತದೆ. ಹಲಾಲ್ ಉತ್ಪನ್ನಗಳನ್ನು ಮುಸ್ಲಿಮರಿಂದ ಮಾತ್ರ ಖರೀದಿಸಬೇಕು ಮತ್ತು ಇತರರಿಂದ ಖರೀದಿಸಬಾರದು ಎಂದು ಯೋಜಿತ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಸಿಟಿ ರವಿ ಆರೋಪಿಸಿದ್ದಾರೆ.












































