
ಬೆಂಗಳೂರು: ಗಡಿ ಸಮಸ್ಯೆಗಳ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ನಮ್ಮ ನೆಲದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, “ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗಲೆಲ್ಲ ಗಡಿ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ಹೆಚ್ಚಿವೆ, ರಾಜ್ಯ ಸರ್ಕಾರವೂ ಅವರ ಹೋರಾಟಕ್ಕೆ ಮುಂದಾಗಿದೆ. ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ರಾಜಕೀಯ ಉಳಿವಿಗಾಗಿ ಗಡಿ ಮತ್ತು ಭಾಷಾ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತಿರುವುದು ತೀರಾ ನೀಚತನ’ ಎಂದು ಹೇಳಿದರು.
ಗಡಿ ಜಿಲ್ಲೆ ಬೆಳಗಾವಿ ತಮಗೇ ಸೇರಬೇಕು ಎಂದು ಮಹಾರಾಷ್ಟ್ರ ಹೇಳಿಕೊಂಡಿದೆ. ಆದರೆ ಕರ್ನಾಟಕ ಸರ್ಕಾರ ತನ್ನ ನಿಲುವಿನಲ್ಲಿ ದೃಢವಾಗಿಯೇ ಇದೆ. ಕೇಂದ್ರದಿಂದ ನೇಮಿಸಲ್ಪಟ್ಟ ಮಹಾಜನ್ ಆಯೋಗವು ಬೆಳಗಾವಿ ಕರ್ನಾಟಕದ ಭಾಗವಾಗಿದೆ ಎಂದು ಹೇಳಿಕೆ ನೀಡಿತ್ತು ಆದರೆ ಮಹಾರಾಷ್ಟ್ರವು ಆಯೋಗದ ವರದಿಯನ್ನು ವಿರೋಧಿಸುತ್ತಲೇ ಇದೆ ಮತ್ತು ಬೆಳಗಾವಿ, ಖಾನಾಪುರ, ಕಾರವಾರ, ಬೀದರ್ ಮತ್ತು ಇತರ ಕೆಲವು ಗಡಿ ಪ್ರದೇಶಗಳು ತನ್ನದೇ ಎಂದು ಹೇಳಿಕೊಂಡಿದೆ.