ಬೆಂಗಳೂರು: ಬೆಂಗಳೂರಿಗರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಕತಾರ್ ಸ್ಪೋರ್ಟ್ಸ್ ಮ್ಯೂಸಿಯಂ ಮಾದರಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ಕ್ರೀಡಾ ಮ್ಯೂಸಿಯಂ ಸ್ಥಾಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಸಂಗ್ರಹಾಲಯವು ಅಂತರಾಷ್ಟ್ರೀಯ ಮತ್ತು ದೇಸಿ ಕ್ರೀಡೆಗಳನ್ನು ಪ್ರದರ್ಶಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಉದ್ದೇಶಿತ ವಸ್ತುಸಂಗ್ರಹಾಲಯವನ್ನು ಬೆಂಗಳೂರಿನ ವಿಠಲ ಮಲ್ಯ ರಸ್ತೆಯ ಕಂಠೀರವ ಕ್ರೀಡಾಂಗಣದಲ್ಲಿ ಸ್ಥಾಪಿಸುವ ಉದ್ಧೇಶವಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕೊನೆಯ ಬಜೆಟ್‌ನಲ್ಲಿ ಮ್ಯೂಸಿಯಂ ಸ್ಥಾಪಿಸುವುದಾಗಿ ಘೋಷಿಸಿದ್ದು, ಇದಕ್ಕಾಗಿ 5 ಕೋಟಿ ರೂ. ಹಣ ಮೀಸಲಿಟ್ಟಿದ್ದರೂ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ.
ಇದೀಗ ಈ ಯೋಜನೆ ಮುನ್ನೆಲೆಗೆ ಬಂದಿದ್ದು ಇದು ದೇಶದಲ್ಲಿಯೇ ಮೊದಲನೆಯ ಕ್ರೀಡಾ ಮ್ಯೂಸಿಯಂ ಆಗಿರಲಿದೆ. ದೇಸಿ ಆಟಗಳು ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಎಲ್ಲವನ್ನೂ ಇಲ್ಲಿ ನೋಡಬಹುದು ಎಂದು ಕ್ರೀಡೆ ಮತ್ತು ಯುವಜನ ಸೇವೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದರು.












































