
ತರಕಾರಿಗಳ ಸೇವನೆಯಿಂದ ನಮ್ಮ ಶರೀರಕ್ಕೆ ಹಲವು ಪ್ರಯೋಜನಗಳಿವೆ . ತರಕಾರಿಗಳಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯವನ್ನು ಉನ್ನತೀಕರಿಸುತ್ತವೆ. ಆದರೆ ಎಲ್ಲಾ ತರಕಾರಿಗಳು ಕೂಡ ಅದರದೇ ಆದಂತಹ ಸೈಡ್ ಎಫೆಕ್ಟ್ ಗಳನ್ನೂ ನೀಡುತ್ತವೆ. ತರಕಾರಿಗಳನ್ನು ಯಾವ ವಿಧಾನದಲ್ಲಿ ಬಳಸುತ್ತೇವೆ ತಿನ್ನುತ್ತೇವೆ ಎನ್ನುವುದರ ಮೇಲೆ ಈ ಸೈಡ್ ಎಫೆಕ್ಟ್ ಗಳು ಅವಲಂಬಿತವಾಗಿರುತ್ತವೆ. ಕೆಲ ತರಕಾರಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ವಿಷಕಾರಕಗಳು ಅಂಶಗಳು ಕೂಡ ಇರುತ್ತವೆ. ಅವುಗಳಲ್ಲಿ ಕೆಲವು ದಿನಬಳಕೆಯ ತರಕಾರಿಗಳತ್ತ ನೋಡಿ ಬರೋಣ.
ಕಿಡ್ನಿ ಬೀನ್ಸ್:
ಹೆಚ್ಚಿನ ದ್ವಿದಳ ಧಾನ್ಯಗಳು ಲೆಕ್ಟಿನ್ ಎನ್ನುವ ವಿಷಕಾರಕ ಅಂಶವನ್ನು ಹೊಂದಿರುತ್ತವೆ. ಅವುಗಳಲ್ಲಿಯೂ ಈ ಕೆಂಪು ಕಿಡ್ನಿ ಬೀನ್ಸ್ ಹೆಚ್ಚಿನ ಪ್ರಮಾಣದ ಲೆಕ್ಟಿನ್‌ನ್ನು ಹೊಂದಿರುತ್ತವೆ. 4 ಅಥವಾ 5 ಹಸಿ ಕಿಡ್ನಿ ಬೀನ್ಸ್ ಕಾಳುಗಳನ್ನು ಸೇವಿಸುವುದರಿಂದ ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ಭೇದಿ ಉಂಟಾಗುತ್ತದೆ. ಒಣಗಿದ ಕಾಳುಗಳನ್ನು ಕನಿಷ್ಠ 12 ಗಂಟೆಗಳ ಕಾಲ ನೆನೆಸಿ ನಂತರ ಕನಿಷ್ಠ 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿದಾಗ ಇದರಲ್ಲಿರುವ ಲೆಕ್ಟಿನ್‌ಗಳು ನಾಶವಾಗುತ್ತವೆ. ಹಾಗಾಗಿ ಹಸಿ ಕಾಲುಗಳನ್ನು ತಪ್ಪಿಯೂ ಸೇವಿಸಬೇಡಿ.
ಟೊಮ್ಯಾಟೊ, ಆಲೂಗಡ್ಡೆ, ಬಿಳಿಬದನೆ:
ಭಾರತೀಯರ ಅಡುಗೆಯಲ್ಲಿ ಹೆಚ್ಚಾಗಿ ಕಂಡು ಬರುವ ಟೊಮೆಟೊ, ಆಲೂಗಡ್ಡೆ ಮತ್ತು ಬಿಳಿಬದನೆಗಳಲ್ಲಿ ಸೋಲನೈನ್ ಮತ್ತು ಚಾಕೋನೈನ್ ವಿಷಗಳು ಇರುತ್ತವೆ. ಮೊಳಕೆಯೊಡೆದ ಆಲೂಗಡ್ಡೆ ಮತ್ತು ತಿಳಿ ಹಸಿರು ಬಣ್ಣ ಬಂದಿರುವ ಆಲೂಗಡ್ಡೆ, ಹಸಿರು ಟೊಮೆಟೊಗಳಲ್ಲಿ ಇವುಗಳು ಹೆಚ್ಚಾಗಿ ಕಂಡುಬರುತ್ತವೆ. ಇವುಗಳಲ್ಲಿನ ವಿಷವನ್ನು ಕಡಿಮೆ ಮಾಡಲು, ಅವುಗಳನ್ನು ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಶೇಖರಿಸಿಡಬೇಕು. ಹಾಗು ಅವುಗಳ ಹಸಿರು ಭಾಗ ಅಥವಾ ಮೊಳಕೆ ಬಂದ ಭಾಗಗಳನ್ನು ತಿನ್ನಬಾರದು. ಹಾಗಾಗಿ ಈ ತರಕಾರಿಗಳನ್ನು ಬಳಸುವಾಗ ಮೇಲಿನ ಅಂಶಗಳ ಬಗ್ಗೆ ಎಚ್ಚರಿಕೆಯಿಂದ ನೋಡಿಕೊಳ್ಳಿ.
ಕ್ಯಾರೆಟ್:
ವಿಶ್ವ ಅರೋಗ್ಯ ಸಂಸ್ಥೆ ಪ್ರಕಾರ ಕ್ಯಾರೆಟ್ ಫುರೋಕಮರಿನ್ಸ್ ಎಂಬ ವಿಷಕಾರಿ ವಸ್ತುಗಳನ್ನು ಹೊಂದಿರುತ್ತವೆ. ಕ್ಯಾರೆಟ್ ಅನ್ನು ಹಸಿಯಾಗಿ ಅಥವಾ ಹೆಚ್ಚಾಗಿ ತಿನ್ನುವುದರಿಂದ ಹೊಟ್ಟೆ ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಕಾಡು ಅಣಬೆ:
ಹಲವರು ಕಾಡು ಅಣಬೆಗಳನ್ನು ಸೇವಿಸಿ ಅಸ್ವಸ್ಥಗೊಂಡಿರುವುದನ್ನು ಹಳ್ಳಿಗಳಲ್ಲಿ ನೋಡಿರುತ್ತೀರಿ. ಕೆಲವೊಮ್ಮೆ ವಿಷ ಹೆಚ್ಚಾಗಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೇ ಸಾವಿಗೀಡಾಗುವ ಹಲವು ಪ್ರಸಂಗಗಳೂ ನಡೆದಿವೆ. ಕಾಡಿನ ಅಣಬೆಗಳಲ್ಲಿ ಮಸ್ಸಿಮೋಲ್ ಮತ್ತು ಮಸ್ಕರಿನ್ ನಂತಹ ಹಲವಾರು ವಿಷಗಳನ್ನು ಇರುತ್ತವೆ. ಈ ವಿಷ ತೀವ್ರವಾದ ವಾಂತಿ, ಅತಿಸಾರ, ಹೊಟ್ಟೆ ಮತ್ತು ಕರುಳಿನ ಅಸ್ವಸ್ಥತೆ, ಜೊಲ್ಲು ಸುರಿಸುವುದು ಮುಂತಾದ ಸಮಸ್ಯೆಗಳನ್ನು ತಂದುಕೊಡುತ್ತವೆ. ಸಾಮಾನ್ಯವಾಗಿ ಕಾಡು ಅಣಬೆಗಳನ್ನು ಸೇವಿಸಿದ 6 ರಿಂದ 24 ಗಂಟೆಗಳ ನಂತರ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ.ಕಾಡು ಅಣಬೆಗಳ ವಿಷವು ಯಕೃತ್ತು, ಮೂತ್ರಪಿಂಡ ಮತ್ತು ನರಮಂಡಲಕ್ಕೆ ಹಾನಿಯುಂಟುಮಾಡುತ್ತವೆ. ಇವುಗಳು ತಡವಾಗಿ ಗೋಚರವಾಗುವ ಕಾರಣ ಕಾಡು ಅಣಬೆಗಳನ್ನು ಸೇವಿಸುವುದು ಒಳ್ಳೆಯದಲ್ಲ.
ಕಳಲೆ (ಬಿದಿರು ಕಳಲೆ):
ಕಳಲೆಯಲ್ಲಿ ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು ಮತ್ತು ವಿಟಮಿನ್‌ಗಳಂತಹ ಅನೇಕ ಪೋಷಕಾಂಶಗಳು ಹೇರಳವಾಗಿ ಕಂಡು ಬರುತ್ತವೆ. ಜತೆಗೆ ಸೈನೋಜೆನಿಕ್ ಗ್ಲೈಕೋಸೈಡ್ ಫೈಟೊಟಾಕ್ಸಿನ್ ಎಂಬ ವಿಷಕಾರಕಗಳನ್ನೂ ಒಳಗೊಂಡಿದೆ. ಇದರಿಂದ ಉಸಿರಾಟದ ತೊಂದರೆ, ರಕ್ತದೊತ್ತಡದ ಕುಸಿತ, ತಲೆತಿರುಗುವಿಕೆ, ತಲೆನೋವು, ಹೊಟ್ಟೆ ನೋವು, ವಾಂತಿ, ಅತಿಸಾರದಂತಹ ಸಮಸ್ಯೆಗಳು ಕಾಣಿಸಬಹುದಾಗಿದೆ.












































