
ಕನ್ನಡದ ಕೆಜಿಎಫ್ ಮೊದಲ ಭಾಗ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ಅದರ 2ನೇ ಭಾಗ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುತ್ತಿರುವುದಾಗಿ ಕೆಜಿಎಫ್ ತಂಡ ಘೋಷಿಸಿತ್ತು. ಕೆಜಿಎಫ್ 2 ರಿಲೀಸ್ ಆಗುವ ಏಪ್ರಿಲ್ 14ರಂದು ಬಾಲಿವುಡ್ ನಟ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಬಿಡುಗಡೆ ಮಾಡುವುದಾಗಿ ಛಡ್ಡಾ ಚಿತ್ರತಂಡ ಘೋಷಿಸಿತ್ತು. ಎರಡೂ ದೊಡ್ಡ ಸ್ಟಾರ್ ಚಿತ್ರಗಳು ಒಂದೇ ದಿನ ಬಿಡುಗಡೆ ಘೋಷಿಸಿ ಕುತೂಹಲ ಮೂಡಿಸಿದ್ದವು.
ಇದೀಗ ಕನ್ನಡದ ಕೆಜಿಎಫ್ ಜತೆ ಸೆಣಸುವ ನಿರ್ಧಾರದಿಂದ ಅಮಿರ್ ಖಾನ್ ಚಿತ್ರ ಹಿಂದೆ ಸರಿದಿದೆ. ಅಮೀರ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರ ಬಿಡುಗಡೆ ಏಪ್ರಿಲ್ ತಿಂಗಳಿಂದ ಆಗಸ್ಟ್ ತಿಂಗಳಿಗೆ ಶಿಫ್ಟ್ ಆಗಿದೆ. ಈ ಬಗ್ಗೆ ಹೇಳಿಕೆ ನೀಡಿದ ಅಮಿರ್ ಖಾನ್ ಪ್ರೊಡಕ್ಷನ್ “ನಮ್ಮ ಚಿತ್ರದ ಕೆಲಸಗಳು ಮುಗಿದಿಲ್ಲ. ಹಾಗಾಗಿ ಲಾಲ್ ಸಿಂಗ್ ಛಡ್ಡಾ ಏಪ್ರಿಲ್ 14ರಂದು ಬಿಡುಗಡೆಯಾಗುತ್ತಿಲ್ಲ. ಚಿತ್ರದ ಬಿಡುಗಡೆಯನ್ನು ಆಗಸ್ಟ್ ಗೆ ಮುಂದೂಡಲಾಗಿದೆ.” ಎಂದು ಹೇಳಿದೆ.
ಕೆಜಿಎಫ್ 1ರಂತೆ ಕೆಜಿಎಫ್-2 ಕೂಡ ಪ್ಯಾನ್ ಇಂಡಿಯಾ ಸಿನೆಮಾವಾಗಿದ್ದು ಕನ್ನಡ, ಹಿಂದಿ. ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.












































