
ಹೈದರಾಬಾದ್: ತೆಲುಗು ನಟ ನರೇಶ್ ಬಾಬು ಹಾಗು ನಟಿ ಪವಿತ್ರ ಲೋಕೇಶ್ ನಡುವಿನ ಲವ್ವಿ ಡವ್ವಿ ಇದೀಗ ತಾರ್ಕಿಕ ಹಂತಕ್ಕೆ ಬಂದಿದ್ದು ಇಬ್ಬರೂ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ. 60 ವರ್ಷ ವಯಸ್ಸಿನ ನಟ ನರೇಶ್ ಗೆ ಇದು ನಾಲ್ಕನೇ ಮದುವೆ.
ನಟ ನರೇಶ್ ತನ್ನ ದೀರ್ಘಕಾಲದ ಒಡನಾಡಿ, ನಟಿ ಪವಿತ್ರಾ ಲೋಕೇಶ್ ಅವರನ್ನು ಕುಟುಂಬ ಮತ್ತು ಸ್ನೇಹಿತರ ಜೊತೆಗಿನ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಪವಿತ್ರಾಗೆ ಇದು ಎರಡನೇ ಮದುವೆ. ಶುಕ್ರವಾರ ಬೆಳಿಗ್ಗೆ ನಟ ತಮ್ಮ ಮದುವೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ನರೇಶ್ ಅವರು “ಶಾಂತಿಯ ಜೀವನಕ್ಕಾಗಿ ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ” ಎಂದು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ.
ನರೇಶ್ ಈ ಹಿಂದೆ ಮೂರು ಮದುವೆಯಾಗಿದ್ದರು. ಹಿರಿಯ ಡ್ಯಾನ್ಸ್ ಮಾಸ್ಟರ್ ಶ್ರೀನು ಅವರ ಮಗಳನ್ನು ಅವರ ಮೊದಲ ವಿವಾಹವಾಗಿದ್ದು, ದಂಪತಿಗೆ ನವೀನ್ ವಿಜಯಕೃಷ್ಣ ಎಂಬ ಮಗನಿದ್ದಾನೆ. ನರೇಶ್ ನಂತರ ಪ್ರಸಿದ್ಧ ಕವಿ ಮತ್ತು ಚಲನಚಿತ್ರ ಗೀತರಚನೆಕಾರ ದೇವುಲಪಲ್ಲಿ ಕೃಷ್ಣ ಶಾಸ್ತ್ರಿ ಅವರ ಮೊಮ್ಮಗಳು ರೇಖಾ ಸುಪ್ರಿಯಾ ಅವರನ್ನು ವಿವಾಹವಾದರು. ಸುಮಾರು ಒಂದು ದಶಕದ ಹಿಂದೆ, ತನ್ನ ಎರಡನೇ ಹೆಂಡತಿಯೊಂದಿಗೆ ಸಂಬಂಧ ಕೊನೆಗೊಳಿಸಿದ ನಂತರ, ಅವರು ತನಗಿಂತ 20 ವರ್ಷ ಚಿಕ್ಕವಳಾದ ರಮ್ಯಾ ರಘುಪತಿಯನ್ನು ವಿವಾಹವಾದರು. ಆ ದಂಪತಿಗೆ ಒಬ್ಬ ಮಗನಿದ್ದಾನೆ.












































