
ಲಕ್ನೋ: ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಹತ್ತಿರ ಇರುವಾಗಲೇ ಹಪೂರ್ ಜಿಲ್ಲೆಯಲ್ಲಿ ಇಂದು ಸಂಜೆ ತಮ್ಮ ಕಾರಿನ ಮೇಲೆ ಹಾರಿಸಲಾಗಿದೆ ಎಂದು ಸ್ವತಃ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶದ ಹಪೂರ್ ಜಿಲ್ಲೆಯಿಂದ ದೆಹಲಿಗೆ ಹಿಂತಿರುಗುತ್ತಿದ್ದಾಗ ತಮ್ಮ ಕಾರಿನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿರುದ್ದಾರೆ ಎಂದು ಓವೈಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 24ರಲ್ಲಿನ ಹಪೂರ್- ಗಾಜಿಯಾಬಾದ್ ಮಾರ್ಗದ ಛಿಜರ್ಸಿ ಟೋಲ್ ಪ್ಲಾಜಾ ಬಳಿ ಇಂದು ಸಂಜೆ 6 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ ಎಂದು ಬರೆದುಕೊಂಡಿದ್ದಾರೆ. ಜತೆಗೆ ಕಾರಿನ ಮೇಲಿರುವ ಗುಂಡಿನ ಕುರುಹುಗಳ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಹಪೂರ್ ನ ಛಿಜರ್ಸಿ ಟೋಲ್ ಗೇಟ್ ಬಳಿ ತಮ್ಮ ಕಾರಿನ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಮೂರರಿಂದ ನಾಲ್ಕು ಮಂದಿ ಗುಂಡು ಹಾರಿಸಿ ಪರಾರಿಯಾದರು. ಇದರಿಂದ ನನ್ನ ಕಾರು ಪಂಕ್ಟರ್ ಆಯಿತು. ಕೂಡಲೇ ಮತ್ತೊಂದು ಕಾರಿಗೆ ಸ್ಥಳಾಂತರವಾಗಿ ಅಲ್ಲಿಂದ ಪಾರಾಗಿದ್ದೇನೆ. ನಾವೆಲ್ಲ ಸುರಕ್ಷಿತರಾಗಿದ್ದೇವೆ ಎಂದು ಅಸಾದುದ್ದೀನ್ ಓವೈಸಿ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.












































