
ಗಾಂಧಿನಗರ: ವಿಜಯ್ ರೂಪಾಣಿ ರಾಜೀನಾಮೆ ಕೊಟ್ಟ ಒಂದು ದಿನದ ಒಳಗೆ ಗುಜರಾತಿಗೆ ನೂತನ ಸಿಎಂ ಆಯ್ಕೆ ಮಾಡಲಾಗಿದೆ. ಇದೊಂದು ಅಚ್ಚರಿಯ ಆಯ್ಕೆಯಾಗಿದ್ದು ಸಂಭಾವ್ಯ ಪಟ್ಟಿಯಲ್ಲಿ ಇಲ್ಲದ ಹೆಸರು ಮುಖ್ಯಮಂತ್ರಿ ಸ್ಥಾನದಲ್ಲಿ ಬಂದು ಕುಳಿತಿದೆ. ಅವರೇ ಗುಜರಾತಿನ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್.
59 ವರ್ಷ ವಯಸ್ಸಿನ ಭೂಪೇಂದ್ರ ಪಟೇಲ್ ಘಾಟಿಲೋಡಿಯ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರವನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಪ್ರತಿನಿಧಿಸುತ್ತಿದರು. ಅದೇ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಎರಡನೇ ವ್ಯಕ್ತಿಯಾಗಿದ್ದಾರೆ ಭೂಪೇಂದ್ರ ಪಟೇಲ್.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭೂಪೇಂದ್ರ ಪಟೇಲ್ ನಾಯಕನಾಗಿ ಅಂಗೀಕಾರವಾದ ಮೇಲೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಭೂಪೇಂದ್ರ ಅವರ ಹೆಸರನ್ನು ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಘೋಷಿಸಿದರು. ತೋಮರ್ ಹಾಗು ಮತ್ತೋರ್ವ ಕೇಂದ್ರ ಸಚಿವ ಕರ್ನಾಟಕದ ಪ್ರಹ್ಲಾದ್ ಜೋಶಿ ಬಿಜೆಪಿ ಹೈ ಕಮಾಂಡ್ ಪರವಾಗಿ ವೀಕ್ಷಕರಾಗಿ ತೆರಳಿದ್ದರು.
‘ಭೂಪೇಂದ್ರ ಅವರಿಗೆ ಸಾಮರ್ಥ್ಯ ಇದ್ದು, ಚುನಾವಣೆಯಲ್ಲಿ ಅವರ ನಾಯಕತ್ವದ ಅಡಿಯಲ್ಲಿ ಪಕ್ಷ ಗೆಲ್ಲುವ ದೃಢ ವಿಶ್ವಾಸವಿದೆ’ ಎಂದು ನಿರ್ಗಮಿತ ಮುಖ್ಯಮಂತ್ರಿ ವಿಜಯ್ ರೂಪಾಣಿ ನೂತನ ಸಿಎಂ ಘೋಷಣೆ ಬಳಿಕ ಹೇಳಿದರು. 65 ವರ್ಷ ವಯಸ್ಸಿನ ವಿಜಯ್ ರೂಪಾಣಿ ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ಅಚಾನಕ್ ಆಗಿ ರಾಜೀನಾಮೆ ನೀಡಿದ್ದರು.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಭೂಪೇಂದ್ರ ಪಟೇಲ್ ಅವರು ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2017ರಲ್ಲಿ ಘಾಟಿಲೋಡಿಯ ಕ್ಷೇತ್ರದಿಂದ ಕಾಂಗ್ರೆಸಿನ ಶಶಿಕಾಂತ್ ಪಟೇಲ್ ಅವರನ್ನು 1 ಲಕ್ಷದ 17 ಸಾವಿರ ಭಾರೀ ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.












































