
ರಾಮನಾಥಪುರಂ: ತಮಿಳುನಾಡಿನ ರಾಮನಾಥಪುರಂನಲ್ಲಿ 5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲು ಯತ್ನಿಸಿದ ತಮಿಳುನಾಡು ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಕಾರ್ಯದರ್ಶಿ ಮತ್ತು ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ಒಟ್ಟು ಏಳು ಹಿಂದೂ ದೇವತೆಗಳ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ಐಪಿಎಸ್ ದಿನಕರನ್ ನೇತೃತ್ವದ ಮಧುರೈ ಪೊಲೀಸ್ ಅಧಿಕಾರಿಗಳು ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ನಾಯಕ ಅಲೆಕ್ಸಾಂಡರ್ ಅವರನ್ನು ಬಂಧಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇಬ್ಬರು ಪೊಲೀಸರು ತನಗೆ ನೀಡಿದ ಏಳು ಹಿಂದೂ ವಿಗ್ರಹಗಳು ತನ್ನ ಬಳಿ ಇರುವುದಾಗಿ ಅಲೆಕ್ಸಾಂಡರ್ ಒಪ್ಪಿಕೊಂಡಿದ್ದಾನೆ. ಬಂಧಿತ ಅಲೆಕ್ಸಾಂಡರ್‌ನಿಂದ ಮುರುಗನ್ ವಿಗ್ರಹ, ವಿನಾಯಕನ ವಿಗ್ರಹ, ಕಾಳಿ ದೇವಿ ವಿಗ್ರಹ, ಎರಡು ನಟರಾಜ ದೇವರ ವಿಗ್ರಹಗಳು ಮತ್ತು ಎರಡು ನಾಗಕನ್ನಿಕ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರುಪ್ಪುಕೊಟ್ಟೈನ ಪೊಲೀಸ್ ಇಲಂಕುಮಾರನ್ ಮತ್ತು ದಿಂಡಿಗಲ್‌ನ ಪೊಲೀಸ್ ಅಧಿಕಾರಿ ನಾಗೇಂದ್ರನ್ ಮತ್ತು ಇತರ ಇಬ್ಬರು ಸೇರಿ ನಾಲ್ಕು ವರ್ಷಗಳ ಹಿಂದೆ ಸೇಲಂನ ಎಡಪಾಡಿಯಲ್ಲಿ ಗ್ಯಾಂಗ್ ಒಂದರಿಂದ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. . ನಂತರ ಅವರು 5 ಕೋಟಿ ರೂ.ಗೆ ಅವಶೇಷಗಳನ್ನು ಮಾರಾಟ ಮಾಡಲು ಅಲೆಕ್ಸಾಂಡರ್ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ












































