
ನವದೆಹಲಿ: ಅಕ್ಟೋಬರ್ 23 ರಂದು ಕೊಯಮತ್ತೂರು ಕಾರ್ ಸ್ಫೋಟದಲ್ಲಿ ಸಾವನ್ನಪ್ಪಿದ 29 ವರ್ಷದ ಇಂಜಿನಿಯರಿಂಗ್ ಪದವೀಧರ ಜಮೇಶಾ ಮುಬೀನ್, ಇಸ್ಲಾಂ ಮೂಲಭೂತವಾದಿ ಭಯೋತ್ಪಾದಕ ಸಂಘಟನೆ ಐಸಿಸ್ ಪ್ರಮಾಣವಚನ ಸ್ವೀಕರಿಸಿದ್ದ ಮತ್ತು ಹಲವು ಹಿಂದೂ ದೇಗುಲಗಳಿಗೆ ಹಾನಿ ಮಾಡಲು “ಆತ್ಮಹತ್ಯಾ ದಾಳಿ” ನಡೆಸಲು ಯೋಜಿಸಿದ್ದ ಎಂಬುದು ಎನ್ಐಎ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎನ್ಐಎ ಅಧಿಕಾರಿಗಳ ಪ್ರಕಾರ, ಒಂದು ಸಮುದಾಯದಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುವ ಉದ್ದೇಶದಿಂದ ಮುಬೀನ್ ನಿರ್ದಿಷ್ಟ ಧರ್ಮದ ಚಿಹ್ನೆಗಳು ಮತ್ತು ಸ್ಮಾರಕಗಳನ್ನು ಹಾನಿ ಮಾಡಲು ಯೋಜಿಸಿದ್ದ. ದೇವಾಲಯದ ಮೇಲೆ ದಾಳಿ ಮಾಡಲು, ವಿಗ್ರಹಗಳನ್ನು ಧ್ವಂಸಗೊಳಿಸಲು ಮತ್ತು ಜನರಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಲು ಆತ ಹಾಗು ಸಹಚರರು ಯೋಜಿಸಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಗುರುವಾರ ತಮಿಳುನಾಡಿನ 42 ಮತ್ತು ಕೇರಳದ ಒಂದು ಸ್ಥಳಗಳಲ್ಲಿ ದಾಳಿ ನಡೆಸಿತು. ತಮಿಳುನಾಡಿನಲ್ಲಿ ಚೆನ್ನೈ, ಕೊಯಮತ್ತೂರು, ತಿರುವಳ್ಳೂರು, ತಿರುಪ್ಪೂರ್, ನೀಲಗಿರಿ, ಚೆಂಗಲ್ಪಟು, ಕಾಂಚೀಪುರಂ ಮತ್ತು ನಾಗಪಟ್ಟಣಂ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಶೋಧ ನಡೆಸಲಾಗಿದೆ. ಕೇರಳದ ಪಾಲಕ್ಕಾಡ್ನ ಒಂದು ಸ್ಥಳದಲ್ಲಿ ಕೂಡ ದಾಳಿ ನಡೆಸಲಾಗಿದೆ.












































