
ನವದೆಹಲಿ: ಕಾಂಗ್ರೆಸ್ ಹೈಕಮಾಂಡ್ ಮೇಲೆ ಮುನಿಸಿಕೊಂಡಿರುವ ಜಿ-23 ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್ ಹಿರಿ ತಲೆಗಳು ಇಂದು ಗುಲಾಮ್ ನಬಿ ಆಜಾದ್ ಅವರ ನಿವಾಸದಲ್ಲಿ ಔತಣಕೂಟದಲ್ಲಿ ಪಾಲ್ಗೊಂಡರು. ಔತಣಕೂಟದಲ್ಲಿ ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಹಾಗು ಪಕ್ಷದ ವೈಫಲ್ಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ಮೊದಲು ಔತಣಕೂಟ G-23ರ ಸದಸ್ಯ ಕಪಿಲ್ ಸಿಬಲ್ ನಿವಾಸದಲ್ಲಿ ಎಂದು ನಿರ್ಧರಿಸಲ್ಪಟ್ಟಿತ್ತು. ಆದರೆ ಕೊನೆ ಕ್ಷಣದಲ್ಲಿ ಸ್ಥಳ ಬದಲಾವಣೆಯಾಗಿ ಗುಲಾಮ್ ನಬಿ ಅಜಾದ್ ನಿವಾಸಕ್ಕೆ ಸ್ಥಳಾಂತರಿಸಲ್ಪಟ್ಟಿತು.
ಹೈಕಮಾಂಡ್ ನಿರ್ಧಾರಗಳ ಕುರಿತು ಮುನಿಸಿಕೊಂಡಿರುವ ಶಶಿ ತರೂರ್, ಆನಂದ್ ಶರ್ಮ, ಸಂದೀಪ್ ದೀಕ್ಷಿತ್, ಮನೀಶ್ ತಿವಾರಿ, ರಾಜ್ ಬಬ್ಬರ್, ಭೂಪೇಂದರ್ ಸಿಂಗ್ ಹೂಡಾ ಮುಂತಾದ ನಾಯಕರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ನಾಯಕತ್ವದ ವಿಫಲತೆ ಬಗ್ಗೆ ನೇರವಾಗಿ ಟೀಕಿಸುವ ಹಾಗು ಪಕ್ಷದ ಭವಿಷ್ಯದ ದೃಷ್ಟಿಯಿಂದ ಚಿಂತಿಸುವ ಜಿ-23 ಬಳಗಕ್ಕೆ ಇತ್ತೀಚಿಗೆ ಮಣಿಶಂಕರ್ ಅಯ್ಯರ್, ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ, ಪ್ರಣೀತ್ ಕೌರ್ ಮುಂತಾದ ಹಿರಿಯರು ಸೇರಿಕೊಂಡಿದ್ದಾರೆ.












































