
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೊರೋನಾ ನಿಯಂತ್ರಣದಲ್ಲಿದ್ದು ಅತೀ ಶೀಘ್ರದಲ್ಲಿ ಬಾಕಿ ಇರುವ ಏಳು ವಿಧಾನಸಭೆ ಉಪಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಬೇಕು, ಈ ಮೂಲಕ ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಈಗಾಗಲೇ 7 ಕ್ಷೇತ್ರಗಳು ಖಾಲಿಯಾಗಿ ನಾಲ್ಕು ತಿಂಗಳು ಸಮಯ ಮುಗಿದಿದ್ದು ಈಗ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಾಗಾಗಿ ಜನರು ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಚುನಾವಣಾ ಆಯೋಗ ಜನರ ಹಕ್ಕುಗಳನ್ನು ಮೊಟಕುಗೊಳಿಸದೆ ಆದಷ್ಟು ಬೇಗ ಚುನಾವಣೆ ಘೋಷಿಸಬೇಕು ಎಂದು ಮಮತಾ ಬ್ಯಾನರ್ಜಿ ಇಂದು ಹೇಳಿದರು.
ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಕೂಡ ಸ್ಪರ್ಧಿಸಬೇಕಾದ ಅನಿವಾರ್ಯತೆಯಿದ್ದು ಸಂವಿಧಾನ ಪ್ರಕಾರ 6 ತಿಂಗಳೊಳಗೆ ಚುನಾವಣೆ ಗೆದ್ದು ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಅವರ ಪಕ್ಷ ಜಯಭೇರಿ ಬಾರಿಸಿದ್ದರೂ, ಸ್ವತಃ ಮಮತಾ ಮಾತ್ರ ಬಿಜೆಪಿಯ ಸುವೆಂಧು ಅಧಿಕಾರಿ ಎದುರು ಸೋಲು ಕಂಡಿದ್ದರು.
ಪಶ್ಚಿಮ ಬಂಗಾಳದ ಭಬಾನಿಪುರ, ದಿನಹತಾ, ಜಂಗೀಪುರ, ಸಂಶೆರ್‌ಗುಂಜ್, ಖರ್ಧಾ, ಘೋಷಭ ಮತ್ತು ಶಾಂತಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಬೇಕಾಗಿದೆ. ಕೊರೋನಾ ಸಾಂಕ್ರಾಮಿಕ ಹೆಚ್ಚಳ ಹಿನ್ನಲೆಯಲ್ಲಿ ಚುನಾವಣೆ ಘೋಷಣೆಯನ್ನು ಚುನಾವಣಾ ಆಯೋಗ ಮುಂದಕ್ಕೆ ಹಾಕಿದೆ.












































