
ನವದೆಹಲಿ: ಅಬಕಾರಿ ನೀತಿ ಪರಿಷ್ಕರಣೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಪರಮೋಚ್ಚ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಇಂದು ರಾತ್ರಿ (ಗುರುವಾರ) ಬಂಧಿಸಿದ್ದಾರೆ. ಸಿಎಂ ಆಗಿದ್ದಾಗಲೇ ಬಂಧನವಾದ ದೇಶದ ಮೊದಲ ಪ್ರಕರಣ ಇದಾಗಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ರಾಜಕೀಯ ನಾಯಕನಾಗಿ ಹೊರಹೊಮ್ಮಿದ ಅರವಿಂದ್ ಕೇಜ್ರಿವಾಲ್ ಇದೀಗ ಅದೇ ಭ್ರಷ್ಟಾಚಾರ ಕೇಸಿನಲ್ಲಿ ಬಂಧನವಾಗುತ್ತಿರುವುದು ವಿಪರ್ಯಾಸ ಎನ್ನಲಾಗಿದೆ.
ಹಲವು ತಿಂಗಳಿಂದ ವಿಚಾರಣೆಗೆ ಹಾಜರಾಗಲು ನಿರಾಕರಿಸುತ್ತ ಬಂದಿದ್ದ ಕೇಜರೀವಾಲ್ ಅವರನ್ನೂ ಕೊನೆಗೂ ಬಂಧಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದ್ದು ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳ ತಂಡ ದೆಹಲಿ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಮತ್ತೊಂದು ಸಮನ್ಸ್ ಜಾರಿ ಮಾಡಿ, ವಿಚಾರಣೆ ನಡೆಸಿ ಇದೀಗ ಅರೆಸ್ಟ್ ಮಾಡಿದೆ.
ದೆಹಲಿ ಸಿಎಂ ನಿವಾಸಕ್ಕೆ ದೆಹಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ ಮತ್ತು ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಳಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೆಹಲಿ ಸಿಎಂ ನಿವಾಸದ ಬಳಿ ಮತ್ತು ಇಡಿ ಕಚೇರಿ ಬಳಿ ದೆಹಲಿ ಪೊಲೀಸ್ ಸಿಬ್ಬಂದಿಯೊಂದಿಗೆ RAF ಮತ್ತು CRPF ಪಡೆಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.
ಅರವಿಂದ್ ಕೇಜ್ರಿವಾಲ್ ಬಂಧನ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕೇಜ್ರಿವಾಲ್ ನಿವಾಸದ ಎದರು ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಇಡಿ ಅಧಿಕಾರಿಗಳ ಘೋಷಣೆಗಳನ್ನು ಕೂಗುತ್ತಿದ್ದಾರೆ.