National

ನಮ್ಮ ನಾಯಕ ಒಬ್ಬ ಮೂರ್ಖ: ಅಫ್ಘಾನ್ ಹಿಂದೆಗೆತಕ್ಕೆ ಅಮೇರಿಕ ಮಾಜಿ ಅಧ್ಯಕ್ಷ ಟ್ರಂಪ್ ಟೀಕೆ

ವಾಷಿಂಗ್ಟನ್: 9/11ರ ಧಾಳಿಯ 20ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಮೇರಿಕಾದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಫ್ಘಾನಿನಲ್ಲಿ ಸಂಪೂರ್ಣ ಸೇನೆ ಹಿಂದೆಗೆತ ಹಾಗು ಆ ನಂತರದ ಘಟನೆಗಳಿಗಾಗಿ ಅಮೇರಿಕಾದ ಹಾಲಿ ಸರಕಾರದ ಅಸಮರ್ಥತೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಮೇರಿಕಾದ ನಡೆಯಿಂದಾದ ಮುಜುಗರದಿಂದ ಪಾರಾಗಲು ನಾವು ಬಹಳಷ್ಟು ಕಷ್ಟಪಡಬೇಕಾಗುತ್ತದೆ ಎಂದಿದ್ದಾರೆ.

ಇದು ಅತ್ಯಂತ ದುಃಖದ ದಿನ, ಸೆಪ್ಟೆಂಬರ್ 11 ಅಮೆರಿಕಕ್ಕೆ ದುಃಖವನ್ನು ಪ್ರತಿನಿಧಿಸುತ್ತದೆ ಎಂದು 9/11ರ ಧಾಳಿಯ 20ನೇ ವಾರ್ಷಿಕೋತ್ಸವ ಸಂದರ್ಭ ಹೊರಡಿಸಿದ ವಿಡಿಯೋ ಸಂದೇಶದಲ್ಲಿ ಟ್ರಂಪ್ ಹೇಳಿಕೊಂಡಿದ್ದಾರೆ. ಹಾಗೆಯೇ ಅಫ್ಘಾನಿನಲ್ಲಿನ ನಮ್ಮ ಯುದ್ಧ ಅತೀವ ನಷ್ಟದೊಂದಿದೆ ಅಂತ್ಯವಾಗಿದ್ದು ಕೂಡ ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದ ನಾಯಕನನ್ನು(ಅಧ್ಯಕ್ಷ) ಒಬ್ಬ ಮೂರ್ಖನಂತೆ ವಿಶ್ವವು ನೋಡುತ್ತಿದೆ ಮತ್ತು ಅದನ್ನೂ ಎಂದಿಗೂ ಸಹಿಸಲು ಹಾಗು ಅನುಮತಿಸಲು ಸಾಧ್ಯವಿಲ್ಲ. ಕೆಟ್ಟದಾದ ಯೋಜನೆ, ನಿರ್ವಹಣೆಯಲ್ಲಿನ ದೌರ್ಬಲ್ಯ ಮತ್ತು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗದ ನಾಯಕರು ಈ ಮುಜುಗರಕ್ಕೆ ಕಾರಣರಾಗಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇತ್ತೀಚಿಗೆ ನಡೆದ ಬಾಂಬ್ ಧಾಳಿಯಲ್ಲಿ 13 ಮಂದಿ ಅಮೆರಿಕ ಸೈನಿಕರು ಪ್ರಾಣ ಕಳೆದುಕೊಂಡ ಬಗೆಗೆ ವಿಷಾದ ಸೂಚಿಸಿದ ಮಾಜಿ ಅಧ್ಯಕ್ಶ ಟ್ರಂಪ್, ಶತಕೋಟಿ ಡಾಲರ್ ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಮೇರಿಕವು ಅಫ್ಘಾನಿಸ್ಥಾನದಲ್ಲಿ ಬಿಟ್ಟು ಬಂದು ಅತ್ಯಂತ ಸುಲಭವಾಗಿ ತಾಲಿಬಾನಿಗಳ ಕೈ ಸೇರುವಂತೆ ಮಾಡಿರುವುದರ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದರು.

ಜೋ ಬಿಡೆನ್ ಆಡಳಿತವು ಅಫ್ಘಾನಿಸ್ತಾನದಲ್ಲಿ ಅವಮಾನಕರವಾದಂತಹ ಸೋಲನ್ನು ಕಂಡಿತು. ಈ ಮುಜುಗರದಿಂದ ಪಾರಾಗಲು ಅಮೇರಿಕ ತೀವ್ರ ರೀತಿಯಲ್ಲಿ ಹೆಣಗಾಡುವ ಪರಿಸ್ಥಿತಿ ಬಂದಿದೆ ಎಂದು ಟ್ರಂಪ್ ಹೇಳಿದರು.

Exit mobile version