
ನವದೆಹಲಿ: ಭಾರತದ 74ನೇ ಗಣರಾಜ್ಯೋತ್ಸವದ ಒಂದು ದಿನ ಮೊದಲು ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಕೋವಿಡ್ ಸಾಂಕ್ರಾಮಿಕ ದೇಶದ ಆರ್ಥಿಕತೆಯನ್ನೇ ಅಲುಗಾಡಿಸಿದೆ. ಕೋವಿಡ್ ಸಾಂಕ್ರಾಮಿಕದಿಂದ ಹಲವು ವಲಯಗಳು ನಷ್ಟ ಅನುಭವಿಸಿವೆ. ಆದರೆ ಸರ್ಕಾರದ ಸಮಯೋಚಿತ ಮತ್ತು ಪೂರ್ವಭಾವಿ ಕ್ರಮಗಳು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡಿದೆ” ಎಂದು ಹೇಳಿದರು.
“ಸಂವಿಧಾನದ ಕರಡು ಸಮಿತಿಯ ನೇತೃತ್ವ ವಹಿಸಿ, ಅದಕ್ಕೆ ಅಂತಿಮ ರೂಪ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ಸದಾ ಕೃತಜ್ಞತೆ ಸಲ್ಲಿಸುತ್ತದೆ. ಆರಂಭಿಕ ಕರಡು ಸಿದ್ಧಪಡಿಸಿದ ನ್ಯಾಯಶಾಸ್ತ್ರಜ್ಞ ಬಿಎನ್ ರಾವ್ ಮತ್ತು ಸಂವಿಧಾನ ರಚನೆಯಲ್ಲಿ ಸಹಾಯ ಮಾಡಿದ ಇತರ ತಜ್ಞರು, ಅಧಿಕಾರಿಗಳ ಪಾತ್ರವನ್ನು ನಾವು ನೆನಪಿಸಿಕೊಳ್ಳಬೇಕು. ಆ ಅಸೆಂಬ್ಲಿಯ ಸದಸ್ಯರು ಭಾರತದ ಎಲ್ಲಾ ಪ್ರದೇಶಗಳು ಮತ್ತು ಸಮುದಾಯಗಳನ್ನು ಪ್ರತಿನಿಧಿಸಿದ್ದರು ಮತ್ತು ಅದರಲ್ಲಿ 15 ಮಹಿಳೆಯರೂ ಇದ್ದರು ಎಂಬ ಅಂಶದ ಬಗ್ಗೆ ನಾವು ಹೆಮ್ಮೆಪಡುತ್ತೇವೆ” ಎಂದು ಮುರ್ಮು ಅವರು ಹೇಳಿದ್ದಾರೆ.












































