
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (ಇಡಿ) ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಹಾಗು ರಾಹುಲ್ ಗಾಂಧಿ ಅವರಿಗೆ ನೋಟೀಸ್ ಜಾರಿ ಮಾಡಿದ್ದು ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಆಡಳಿತಾರೂಢ ಬಿಜೆಪಿ ಮೇಲೆ ಹರಿಹಾಯ್ದಿದ್ದು ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಹೇಳಿದೆ.
ಮುಂದಿನ ಬುಧವಾರ ಜೂನ್ 8 ರಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಕರೆದಿದೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಪ್ರಕರಣಕ್ಕೆ ಸಂಬಂಧಿಸಿ ಸೋನಿಯಾ ಗಾಂಧಿ ಅವರು ಮರೆಮಾಚುವಂತಹುದು ಏನೂ ಇಲ್ಲ.ಹಾಗಾಗಿ ಜೂನ್ 8ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ನಿರ್ಧರಿಸಲಾಗಿದೆ. ನಾವು ಬಿಜೆಪಿ ಈ ಸೇಡಿನ ರಾಜಕೀಯಕ್ಕೆ ಹೆದರುವುದಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಚಳವಳಿಯ ಧ್ವನಿಯಾಗಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ತಡೆಯಲು ಚುನಾವಣಾ ಆಯೋಗಕ್ಕೆ ಸಾಧ್ಯವಾಗುವುದಿಲ್ಲ ಅಥವಾ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಹೆದರಿಸಲು ಸಾಧ್ಯವಿಲ್ಲ. ನಾವು ಅಂತಹ ತಂತ್ರಗಳಿಗೆ ಹೆದರುವುದಿಲ್ಲ ಎಂದು ಸಿಂಘ್ವಿ ಕಿಡಿಕಾರಿದರು.












































