
ಪಣಜಿ: ಗೋವಾ ವಿಧಾನಸಭೆ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು ಆಡಳಿತಾರೂಢ ಬಿಜೆಪಿ ಪಕ್ಷ ಹರಸಾಹಸಪಟ್ಟು ಅಧಿಕಾರದ ಸನಿಹಕ್ಕೆ ಬಂದಿದೆ. ಈವರೆಗಿನ ವರದಿಯಂತೆ 19 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಮೂವರು ಪಕ್ಷೇತರರು ಬಿಜೆಪಿ ಬೆಂಬಲ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.
40 ಸದಸ್ಯರ ವಿಧಾನಸಭೆಯಲ್ಲಿ ಅಧಿಕಾರಕ್ಕೆ 21 ಸ್ಥಾನಗಳ ಅಗತ್ಯವಿದ್ದು ಪ್ರಧಾನ ಪಕ್ಷಗಳಾದ ಬಿಜೆಪಿ 19, ಕಾಂಗ್ರೆಸ್ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಗೆಲುವಿನ ಸಂಖ್ಯೆ ಅಧಿಕಾರದ ಸ್ಥಾನದ ಸಂಖ್ಯೆಗಿಂತ ತುಂಬಾ ಹಿಂದಿದ್ದು ಬಿಜೆಪಿಗೆ ಅವಕಾಶಗಳು ಹೆಚ್ಚಿವೆ. ಹಾಗಾಗಿ ಪಕ್ಷೇತರರು ಬಿಜೆಪಿ ಕಡೆಗೆ ವಾಲಿದ್ದು ಬಿಜೆಪಿ ಹಾದಿ ಸುಗಮವಾದಂತಾಗಿದೆ.
ಮತ್ತೊಂದೆಡೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರನಾಗಿ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ಅತ್ಯಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಗೋವಾ ರಾಜಧಾನಿ ಪಣಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉತ್ಪಲ್ ಪರಿಕ್ಕರ್ ಅವರು ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಮಾನ್ಸೆರೇಟ್ ವಿರುದ್ಧ 713 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.