National

ಕಾಶಿ: ಹಿಂದೂ ದೇಗುಲದ ಅವಶೇಷಗಳ ಮೇಲೆ ಜ್ಞಾನವ್ಯಾಪಿ ಮಸೀದಿ; ಎಎಸ್ಐ ಸಮೀಕ್ಷಾ ವರದಿ

ವಾರಣಾಸಿ: ಹಿಂದೂಗಳ ದೊಡ್ಡ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತಾಗಿಕೊಂಡಂತಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಸರ್ವೇ ವರದಿಯನ್ನು ಎಎಸ್ಐ (ಭಾರತೀಯ ಪುರಾತತ್ವ ಇಲಾಖೆ) ಬಹಿರಂಗಪಡಿಸಿದ್ದು, ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಅವಶೇಷಗಳ ಮೇಲೆ ಮಸೀದಿಯನ್ನು ಕಟ್ಟಲಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಮಸೀದಿಗೂ ಮೊದಲು ಅಲ್ಲಿ ದೊಡ್ಡ ಹಿಂದೂ ದೇಗುಲ ಇತ್ತು ಎಂಬುದಕ್ಕೆ ಸಮೀಕ್ಷೆಯಲ್ಲಿ 32 ಸ್ಥಳಗಳಲ್ಲಿ ಪುರಾವೆಗಳು ದೊರಕಿವೆ. ಮಸೀದಿಗೂ ಮೊದಲು ಅಲ್ಲಿ ಹಿಂದೂ ದೇವಾಲಯವಿತ್ತು ಎಂಬುದನ್ನು ಇದು ಮತ್ತಷ್ಟು ಪುಷ್ಟೀಕರಿಸುತ್ತದೆ. ಮೊಘಲರ ಕಾಲದಲ್ಲಿ ಅಂದಿನ ಮೊಘಲ್ ರಾಜ ಔರಂಗಜೇಬ 2 ಸೆಪ್ಟೆಂಬರ್ 1669 ರಂದು ದೇವಾಲಯವನ್ನು ನಾಶಗೊಳಿಸಿದ್ದ. ಸಮೀಕ್ಷೆಯಲ್ಲಿ ಹಿಂದೂ ದೇವರುಗಳಾದ ಜನಾರ್ದನ, ರುದ್ರ ಮತ್ತು ವಿಶ್ವೇಶ್ವರನ ಬಗ್ಗೆ ಶಾಸನಗಳು ಕಂಡುಬಂದಿವೆ.

ಈ ಬಗ್ಗೆ ಮಾತನಾಡಿದ ಜ್ಞಾನವ್ಯಾಪಿ ಮಸೀದಿ ಪ್ರಕರಣದಲ್ಲಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು, 839 ಪುಟಗಳ ಸಮೀಕ್ಷಾ ವರದಿಯ ಪ್ರತಿಗಳನ್ನು ಗುರುವಾರ ತಡರಾತ್ರಿ ನ್ಯಾಯಾಲಯವು ಸಂಬಂಧಪಟ್ಟ ಕಕ್ಷಿದಾರರಿಗೆ ನೀಡಿದೆ ಎಂದು ತಿಳಿಸಿದ್ದಾರೆ. ಜ್ಞಾನವಾಪಿಯ ಪಶ್ಚಿಮ ಗೋಡೆಯು ಹಿಂದೂ ದೇವಾಲಯದ ಭಾಗವಾಗಿತ್ತು. ಕಣ್ಣಿಗೆ ರಾಚುವಂತಿರುವ ಅದನ್ನು ಅದನ್ನು ಸುಲಭವಾಗಿ ಗುರುತಿಸಬಹುದಾಗಿದೆ ಎಂದು ಹಿಂದೂ ಪರ ವಕೀಲರು ತಿಳಿಸಿದ್ದಾರೆ.

34 ಶಾಸನಗಳು ಹಾಗು ಪುರಾವೆಗಳು: ಪ್ರಸ್ತುತ ಸಮೀಕ್ಷೆಯಲ್ಲಿ ಒಟ್ಟು 34 ಶಾಸನಗಳನ್ನು ದಾಖಲಿಸಲಾಗಿದೆ ಮತ್ತು 32 ಎಸ್ಟೇಂಪೇಜ್‌ಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳು ವಾಸ್ತವವಾಗಿ ಹಿಂದೆ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯಗಳ ಕಲ್ಲುಗಳ ಮೇಲಿನ ಶಾಸನಗಳಾಗಿವೆ. ಇವುಗಳನ್ನು ಈಗ ಅಸ್ತಿತ್ವದಲ್ಲಿರುವ ಮಸೀದಿಯ ರಚನೆಯ ನಿರ್ಮಾಣ ಹಾಗು ದುರಸ್ತಿ ಸಮಯದಲ್ಲಿ ಮರುಬಳಕೆ ಮಾಡಲಾಗಿದೆ. ಅವು ದೇವನಾಗರಿ, ಗ್ರಂಥ, ತೆಲುಗು ಮತ್ತು ಕನ್ನಡ ಲಿಪಿಗಳ ಶಾಸನಗಳನ್ನು ಒಳಗೊಂಡಿವೆ. ಈ ಶಾಸನಗಳಲ್ಲಿ ಜನಾರ್ದನ, ರುದ್ರ, ಮತ್ತು ಮಹೇಶ್ವರ ಮೂರು ದೇವತೆಗಳ ಹೆಸರುಗಳು ಕಂಡುಬರುತ್ತವೆ.

ದೇವಾಲಯವನ್ನು ಕೆಡವಲು ಔರಂಗಜೇಬ ಆದೇಶಿಸಿದ ಶಾಸನ: ಮಸೀದಿಯ ಕೋಣೆಯಿಂದ ಶಾಸನವುಳ್ಳ ಕಲ್ಲು ಪತ್ತೆಯಾಗಿದೆ. ಅದರಲ್ಲಿ ಮಸೀದಿ ನಿರ್ಮಾಣ ಮತ್ತು ಅದರ ವಿಸ್ತರಣೆಗೆ ಸಂಬಂಧಿಸಿದ ಸಾಲುಗಳನ್ನು ಗೀಚಲಾಗಿದೆ. ಮೊಘಲ್ ದೊರೆ ಔರಂಗಜೇಬನ ಮಾಸಿರ್-ಇ-ಆಲಂಗಿರಿ ಜೀವನಚರಿತ್ರೆಯಿಂದ ಇದನ್ನು ಹೊರತರಲಾಗಿದೆ, ಇದು ಔರಂಗಜೇಬ್ ನಾಸ್ತಿಕರ (ಇಸ್ಲಾಂ ಅಲ್ಲದವರ) ಶಾಲೆಗಳು ಮತ್ತು ದೇವಾಲಯಗಳನ್ನು ಕೆಡವಲು ಎಲ್ಲಾ ಪ್ರಾಂತ್ಯಗಳ ಗವರ್ನರ್‌ಗಳಿಗೆ ಆದೇಶಗಳನ್ನು ನೀಡಿದ್ದನ್ನು ಉಲ್ಲೇಖಿಸುತ್ತದೆ.

ದೇವತೆಗಳ ಶಿಲ್ಪಗಳು: ಹಿಂದೂ ದೇವತೆಗಳ ಶಿಲ್ಪಗಳು ಮತ್ತು ಕೆತ್ತಿದ ವಾಸ್ತುಶಿಲ್ಪದ ರಚನೆಗಳನ್ನು ನೆಲಮಾಳಿಗೆಯಲ್ಲಿ ಮಣ್ಣಿನ ಅಡಿಯಲ್ಲಿ ಹೂಳಲಾಗಿದೆ. ಅಸ್ತಿತ್ವದಲ್ಲಿರುವ ವಾಸ್ತುಶಿಲ್ಪದ ಅವಶೇಷಗಳು, ಗೋಡೆಗಳ ಮೇಲೆ ಅಲಂಕೃತವಾದ ಅಚ್ಚುಗಳು, ಕೇಂದ್ರ ಕೊಠಡಿಯ ಕಾಮ-ರಥ ಮತ್ತು ಪ್ರತಿ-ರಥ, ಪಶ್ಚಿಮ ಕೊಠಡಿಯ ಪೂರ್ವ ಗೋಡೆಯ ಮೇಲೆ ತೋರಣದೊಂದಿಗೆ ದೊಡ್ಡ ಅಲಂಕೃತ ಪ್ರವೇಶ ದ್ವಾರ, ಲಲತ್ ಬಿಂಬ, ಪಕ್ಷಿಗಳು ಮತ್ತು ಪ್ರಾಣಿಗಳ ಮೇಲೆ ವಿರೂಪಗೊಂಡ ಚಿತ್ರವಿರುವ ಸಣ್ಣ ಪ್ರವೇಶದ್ವಾರ, ಒಳಗೆ ಮತ್ತು ಹೊರಗೆ ಅಲಂಕಾರಕ್ಕಾಗಿ ಕೆತ್ತಲಾದ ಪಶ್ಚಿಮ ಗೋಡೆಯು ಇದು ಹಿಂದೂ ದೇವಾಲಯದ ಭಾಗ ಎಂದು ಸೂಚಿಸುತ್ತದೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd

Exit mobile version