
ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ಪರ ಮತ್ತು ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದ್ದು ರಾಜ್ಯ ಸರಕಾರ 3 ದಿನಗಳ ಕಾಲ ರಾಜ್ಯದ ಎಲ್ಲ ಪ್ರೌಢ ಶಾಲೆ ಹಾಗು ಕಾಲೇಜುಗಳನ್ನು ಮುಚ್ಚುವಂತೆ ಆದೇಶಿಸಿದೆ. ಮತ್ತೊಂದೆಡೆ ಹಿಜಾಬ್ ಧರಿಸಲು ಅನುವು ಮಾಡಿಕೊಡುವಂತೆ ಉಡುಪಿಯ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯ ವಿಚಾರಣೆ ಆರಂಭಿಸಿರುವ ಕರ್ನಾಟಕ ಹೈಕೋರ್ಟ್ ಯಾವ ರೀತಿ ತೀರ್ಪು ನೀಡಲಿದೆ ಅನ್ನುವುದರ ಮೇಲೆ ಕುತೂಹಲ ಹೆಚ್ಚಿದೆ.
ಪರ ವಿರೋಧ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ, ಹಿಜಾಬ್‌ಗಳು, ಬುರ್ಖಾಗಳು, ಫುಲ್ ಫೇಸ್ ಹೆಲ್ಮೆಟ್‌ಗಳು ಸೇರಿದಂತೆ ಮುಖಕವಚಗಳನ್ನು ನಿಷೇಧಿಸಿದ ದೇಶಗಳ ನೋಟ ಇಲ್ಲಿದೆ.
ಫ್ರಾನ್ಸ್ :
2011 ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮುಖವನ್ನು ಮುಚ್ಚಿಕೊಳ್ಳುವುದನ್ನು ನಿಷೇಧಿಸುವ ಕಾಯಿದೆ ಜಾರಿಗೆ ತರುವುದರ ಮೂಲಕ ಮುಖದ ಹೊದಿಕೆಗಳನ್ನು ಫ್ರಾನ್ಸ್ ನಿಷೇಧಿಸಿತು. ಈ ಕಾಯಿದೆಯನ್ನು ಫ್ರಾನ್ಸ್‌ನ ಸೆನೆಟ್ 14 ಸೆಪ್ಟೆಂಬರ್ 2010 ರಂದು ಅಂಗೀಕರಿಸಿತು. ಈ ಕಾಯಿದೆಯು ಸಾರ್ವಜನಿಕ ಸ್ಥಳಗಳಲ್ಲಿ ಮುಖವನ್ನು ಮುಚ್ಚುವ ಮುಖವಾಡಗಳು, ಮುಖ ಮುಚ್ಚುವ ಹೆಲ್ಮೆಟ್‌ಗಳು, ನಿಕಾಬ್‌ಗಳು ಮತ್ತು ಇತರ ಮುಸುಕುಗಳನ್ನು ಒಳಗೊಂಡಂತೆ ಮುಖವನ್ನು ಮುಚ್ಚುವ ಹಿಜಾಬ್ ಧರಿಸುವುದನ್ನು ನಿಷೇಧಿಸಿತು. ಜತೆಗೆ ಇಲ್ಲಿ ಬುರ್ಖಾವನ್ನು ಸಹ ನಿಷೇಧಿಸಲಾಗಿದೆ.
ಸ್ವಿಟ್ಜರ್‌ಲ್ಯಾಂಡ್:
ಮಾರ್ಚ್ 2021 ರಲ್ಲಿ ಸ್ವಿಟ್ಜರ್ಲೆಂಡ್ ‘ಬುರ್ಖಾ’ವನ್ನು ನಿಷೇಧಿಸಿತು. ಇದಕ್ಕಾಗಿ ದೇಶದಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಬುರ್ಖಾ ಹಿಜಾಬ್ ನಿಷೇಧಕ್ಕೆ ಜಯ ದೊರಕಿತ್ತು. ನಿಷೇಧ ಪರ ಶೇಕಡಾ 51.2 ಹಾಗು ನಿಷೇಧವನ್ನು ವಿರೋಧಿಸಿ ಶೇಕಡಾ 48.8 ಮತಗಳು ಚಲಾವಣೆಯಾದವು.
“ಇಸ್ಲಾಂ ತೀವ್ರಗಾಮಿತನಕ್ಕೆ ಸ್ವಿಟ್ಜರ್ಲೆಂಡ್ನಲ್ಲಿ ಯಾವುದೇ ಸ್ಥಾನವಿಲ್ಲ. ನಮ್ಮ ಸಂಪ್ರದಾಯವೆಂದರೆ ನೀವು ನಿಮ್ಮ ಮುಖವನ್ನು ತೋರಿಸುತ್ತೀರಿ. ಇದು ನಮ್ಮ ಮೂಲಭೂತ ಸ್ವಾತಂತ್ರ್ಯದ ಸಂಕೇತವಾಗಿದೆ ಎಂದು ಜನಾಭಿಪ್ರಾಯ ಸಂಗ್ರಹ ಸಮಿತಿಯ ಅಧ್ಯಕ್ಷ ಮತ್ತು ಸ್ವಿಸ್ ಪೀಪಲ್ಸ್ ಪಾರ್ಟಿಯ ಸಂಸತ್ ಸದಸ್ಯ ವಾಲ್ಟರ್ ವೊಬ್ಮ ನಿಷೇಧ ಪ್ರಸ್ತಾಪದ ಸಂದರ್ಭ ಹೇಳಿದ್ದರು.
ನೆದರ್‌ಲ್ಯಾಂಡ್ಸ್:
ನೆದರ್‌ಲ್ಯಾಂಡ್ಸ್‌ನಲ್ಲಿ, ಸಾರ್ವಜನಿಕವಾಗಿ ಮುಖವನ್ನು ಮುಚ್ಚಿದರೆ ಕನಿಷ್ಠ 150 ಯುರೊವನ್ನು ದಂಡವಾಗಿ ನೀಡಬೇಕು. ಆಗಸ್ಟ್ 2019 ರಲ್ಲಿ ಜಾರಿಗೆ ಬಂದ ಈ ನಿಷೇಧವು ಬುರ್ಖಾಗಳು, ಫುಲ್‌ಫೇಸ್ ಹೆಲ್ಮೆಟ್‌ಗಳು ಮತ್ತು ಹಿಜಾಬ್ ಗಳಿಗೆ ಅನ್ವಯಿಸುತ್ತದೆ. 14 ವರ್ಷಗಳ ಸುದೀರ್ಘ ಚರ್ಚೆಯ ನಂತರ ಇಲ್ಲಿ ನಿಷೇಧ ಜಾರಿಗೆ ಬಂದಿದೆ.
ಶ್ರೀಲಂಕಾ:
ರಾಷ್ಟ್ರೀಯ ಭದ್ರತೆಯ ಕಾರಣದಿಂದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ರೀತಿಯ ಮುಖದ ಮುಸುಕುಗಳನ್ನು ನಿಷೇಧಿಸುವ ಪ್ರಸ್ತಾಪವನ್ನು ಶ್ರೀಲಂಕಾದ ಕ್ಯಾಬಿನೆಟ್ ಏಪ್ರಿಲ್ 2021 ರಲ್ಲಿ ಅನುಮೋದಿಸಿತು. ಆದರೆ, ಈ ಕ್ರಮವು ಕೇವಲ ಪ್ರಸ್ತಾವನೆಯ ರೂಪದಲ್ಲಿದ್ದು, ತರಾತುರಿಯಲ್ಲಿ ಜಾರಿಗೊಳಿಸಲು ಯಾವುದೇ ಕಾರಣವಿಲ್ಲ ಎಂದು ಸರ್ಕಾರ ಹೇಳಿತ್ತು. ಬುರ್ಖಾ ಎಂಬುದು ಧಾರ್ಮಿಕ ತೀವ್ರಗಾಮಿತನದ ಪರಮಾವಧಿ ಎಂದು ಶ್ರೀಲಂಕಾದ ಸಚಿವರೊಬ್ಬರು ಇತ್ತೀಚಿಗೆ ಹೇಳಿಕೆ ನೀಡಿದ್ದರು.
ಬೆಲ್ಜಿಯಂ:
2011 ರಿಂದ ಬೆಲ್ಜಿಯಂನಲ್ಲಿ ಸಾರ್ವಜನಿಕವಾಗಿ ಬುರ್ಖಾ ಸೇರಿದಂತೆ ಸಂಪೂರ್ಣ ಮುಖದ ಹೊದಿಕೆಗಳನ್ನು ನಿಷೇಧಿಸಲಾಗಿದೆ. ಕಾನೂನನ್ನು ಉಲ್ಲಂಘಿಸುವ ಜನರು ದಂಡ ಅಥವಾ ಏಳು ದಿನಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಬೆಲ್ಜಿಯಂ ಕೇವಲ ಒಂದು ಮಿಲಿಯನ್ ಮುಸ್ಲಿಮರನ್ನು ಹೊಂದಿದೆ ಮತ್ತು ಅವರಲ್ಲಿ ಕೇವಲ 300 ಜನರು ಬುರ್ಖಾ ಅಥವಾ ನಿಖಾಬ್ ಧರಿಸುತ್ತಾರೆ.
ಚೀನಾ:
2017 ರಲ್ಲಿ, ಚೀನಾವು ಪ್ರಧಾನವಾಗಿ ಮುಸ್ಲಿಂ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಬುರ್ಖಾಗಳು, ಮುಸುಕುಗಳು ಮತ್ತು ಅಸಹಜವಾಗಿ ಗಡ್ಡವನ್ನು ಬಿಡುವುದನ್ನು ನಿಷೇಧಿಸಿತು. ಧಾರ್ಮಿಕ ಉಗ್ರವಾದವನ್ನು ದಮನಗೊಳಿಸಲು ಈ ಕ್ರಮ ಎಂದು ಚೀನಾ ಹೇಳಿಕೊಂಡಿತ್ತು.
ಡೆನ್ಮಾರ್ಕ್:
ಡೆನ್ಮಾರ್ಕ್‌ನಲ್ಲಿ, 2018ರ ಮೇ ತಿಂಗಳಲ್ಲಿ ಕಾನೂನನ್ನು ಮಾನ್ಯ ಮಾಡಿದ ನಂತರ ಆಗಸ್ಟ್ 2018 ರಲ್ಲಿ ಬುರ್ಖಾಗಳನ್ನು ಮೊದಲು ನಿಷೇಧಿಸಲಾಯಿತು. ಉಲ್ಲಂಘಿಸಿದವರಿಗೆ 135 ಯುರೋವರೆಗೆ ದಂಡವನ್ನು ವಿಧಿಸಲಾಗುತ್ತದೆ.
ಆಸ್ಟ್ರಿಯಾ: ಆಸ್ಟ್ರಿಯಾದಲ್ಲಿ, ಜನರು ತಮ್ಮ ಮುಖವನ್ನು ಕೂದಲಿನಿಂದ ಗಲ್ಲದವರೆಗೆ ಕಾಣುವಂತೆ ಮಾಡಬೇಕೆಂದು ಕಾನೂನು ಆದೇಶಿಸುತ್ತದೆ, ನಿಷೇಧವು 2017 ರಿಂದ ಜಾರಿಯಲ್ಲಿದೆ. ಕಾನೂನನ್ನು ಉಲ್ಲಂಘಿಸುವವರು 150 ಯುರೋವರೆಗೆ ದಂಡವನ್ನು ಕಟ್ಟಬೇಕು.
ಬಲ್ಗೇರಿಯಾ:
ಬಲ್ಗೇರಿಯಾದಲ್ಲಿ, ಬುರ್ಖಾ ನಿಷೇಧವು 2016 ರಿಂದ ಜಾರಿಯಲ್ಲಿದೆ ಮತ್ತು ಉಲ್ಲಂಘಿಸುವವರಿಗೆ ಬರೋಬ್ಬರಿ 750 ಯುರೋವರೆಗೆ (ಭಾರತೀಯ ರೂಗಳಲ್ಲಿ ಸುಮಾರು 64,000) ದಂಡ ವಿಧಿಸಲಾಗುತ್ತದೆ. ಆದಾಗ್ಯೂ, ಇದು ಕೆಲಸದಲ್ಲಿ ಅಥವಾ ಪ್ರಾರ್ಥನೆಯ ಮನೆಯಲ್ಲಿ ವಿನಾಯಿತಿಗಳನ್ನು ನೀಡಿದೆ.
ಯುರೋಪಿಯನ್ ಯೂನಿಯನ್: ಕಳೆದ ವರ್ಷ ಜುಲೈನಲ್ಲಿ, ಯುರೋಪಿಯನ್ ಯೂನಿಯನ್‌ನ ಅತ್ಯುನ್ನತ ನ್ಯಾಯಾಲಯವು 2017ರ ತೀರ್ಪನ್ನು ಎತ್ತಿಹಿಡಿದಿದ್ದು, ತೀರ್ಪಿನ ಅನ್ವಯ ಯುರೋಪ್‌ನಲ್ಲಿ ಉದ್ಯೋಗದಾತರು ಮಹಿಳೆಯರು ಕೆಲಸ ಮಾಡುವಾಗ ಹಿಜಾಬ್ ಧರಿಸುವುದನ್ನು ನಿಷೇಧಿಸಲು ಅವಕಾಶ ನೀಡುತ್ತದೆ.