ಪಾಟ್ನಾ: ಈ ಹಿಂದೆ ಭಾರೀ ಚರ್ಚೆಗೆ ಒಳಪಟ್ಟಿದ್ದ ಇಸ್ಲಾಮಿಗರ ಹಲಾಲ್ ಮಾಂಸದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದೂಗಳು ಅನ್ಯಮತೀಯ ಸಂಪ್ರದಾಯದ ಹಲಾಲ್ ಮಾಂಸವನ್ನು ತಿನ್ನುವುದನ್ನು ತ್ಯಜಿಸಬೇಕು ಮತ್ತು ಜಟ್ಕಾ (ಒಂದೇ ಹೊಡೆತದಿಂದ ಕೊಲ್ಲಲ್ಪಟ್ಟ ಪ್ರಾಣಿಗಳ ಮಾಂಸ) ಮಾಂಸ ಮಾತ್ರ ಸೇವಿಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹಿಂದೂ ಧರ್ಮೀಯರಿಗೆ ಕರೆ ನೀಡಿದ್ದಾರೆ.

ಬಿಹಾರದ ಬೇಗುಸರಾಯ್‌ಯಲ್ಲಿ ಭಾನುವಾರ ಮಾತನಾಡಿದ ಅವರು, ಜಟ್ಕಾ ಮಾಂಸ ವಿಧಾನದಲ್ಲಿ ಪ್ರಾಣಿಯನ್ನು ಒಂದೇ ಹೊಡೆತದಲ್ಲಿ ಕೊಲ್ಲಲಾಗುತ್ತದೆ. ಇನ್ನು ಮುಂದೆ ಹಲಾಲ್ ಮಾಂಸವನ್ನು ತಿನ್ನುವ ಮೂಲಕ ನಮ್ಮ ಧರ್ಮವನ್ನು ಭ್ರಷ್ಟಗೊಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ʼʼಹಲಾಲ್ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರನ್ನು ನಾನು ಮೆಚ್ಚುತ್ತೇನೆ. ಈಗ ಹಿಂದೂಗಳು ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳಿಗೆ ಇದೇ ರೀತಿಯ ಬದ್ಧತೆಯನ್ನು ಪ್ರದರ್ಶಿಸಬೇಕುʼʼ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಹಿಂದೂ ವಧೆಯ ವಿಧಾನವೆಂದರೆ ಅದು ಜಟ್ಕಾ. ಹಿಂದೂಗಳು ಪ್ರಾಣಿ ಬಲಿ ಮಾಡಿದಾಗಲೆಲ್ಲ ಒಂದೇ ಹೊಡೆತಕ್ಕೆ ಕೊಲ್ಲುತ್ತಾರೆ. ಆದ್ದರಿಂದ ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮನ್ನು ಭ್ರಷ್ಟಗೊಳಿಸಬಾರದು. ಯಾವಾಗಲೂ ಜಟ್ಕಾ ವಿಧಾನವನ್ನೇ ಆಯ್ದುಕೊಳ್ಳಬೇಕು ಎಂದು ಗಿರಿರಾಜ್ ಸಿಂಗ್ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.












































