ನವದೆಹಲಿ: ಯುಎಪಿಎ ಕಾನೂನು ಅಡಿಯಲ್ಲಿ ದೇಶ ದ್ರೋಹಿ ಚಟುವಟಿಕೆಗಳ ಕಾರಣಕ್ಕಾಗಿ ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ (ಮಸರತ್ ಆಲಂ ಗ್ರೂಪ್) ಸಂಘಟನೆಯನ್ನು ಅನ್ನು ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ನಿಷೇಧಿಸಿದೆ. ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ) ಎಂಎಲ್‌ಜೆಕೆ-ಎಂಎಯನ್ನು ಯುಎಪಿಎ ಅಡಿಯಲ್ಲಿ ಅಕ್ರಮ ಸಂಘಟನೆ ಎಂದು ಘೋಷಿಸಲಾಗಿದೆ ಎಂದು ಅಮಿತ್ ಶಾ ಎಕ್ಸ್ ಟ್ವಿಟ್ಟರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಈ ಸಂಘಟನೆ ಮತ್ತು ಅದರ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಘಟನೆ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಜನರನ್ನು ಪ್ರಚೋದಿಸುತ್ತದೆ. ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ವಿರುದ್ಧವಾಗಿ ಕೆಲಸ ಮಾಡುವವರನ್ನು ಯಾವುದೇ ಬೆಲೆಗೆ ಉಳಿಸಲಾಗುವುದಿಲ್ಲ ಎಂಬುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಂದೇಶವಾಗಿದೆ ಎಂದು ಅಮಿತ ಶಾ ಪ್ರತಿಪಾದಿಸಿದ್ದಾರೆ.