
ಹೊಸದಿಲ್ಲಿ: ತಾಂತ್ರಿಕ ಪ್ರಮಾದದಿಂದ ಭಾರತದ ಸೂಪರ್‌ಸಾನಿಕ್ ಕ್ಷಿಪಣಿ ಪಾಕಿಸ್ತಾನದ ಭೂಪ್ರದೇಶದ ಒಳಗಡೆ ಹೋಗಿದ್ದು ಈ ಬಗ್ಗೆ ಭಾರತೀಯ ರಕ್ಷಣಾ ಸಚಿವಾಲಯ ಖಚಿತಪಡಿಸಿಕೊಂಡಿದೆ. ತಾಂತ್ರಿಕ ಸಮಸ್ಯೆಯಿಂದ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆಯಾಗಿದ್ದು, ಈ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಬುಧವಾರ ಉಡಾವಣೆಯಾಗಿರುವ ಕ್ಷಿಪಣಿ ಪಾಕಿಸ್ತಾನದ ಪ್ರದೇಶದಲ್ಲಿ ಇಳಿದಿದ್ದು ಈ ಅವಘಡದಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಭಾರತದ ಸಿರ್ಸಾದಿಂದ ಉಡಾವಣೆಯಾದ ಕ್ಷಿಪಣಿಯು ಬುಧವಾರ ಸಂಜೆ ಪಾಕಿಸ್ತಾನದ ಗಡಿಯೊಳಗೆ 124 ಕಿಮೀಯಷ್ಟು ದೂರ ಬಂದು ಬಿದ್ದಿದೆ. ಈ ಕ್ಷಿಪಣಿಯು 40,000 ಅಡಿ ಎತ್ತರದಲ್ಲಿ ಹಾರಾಟ ನಡೆಸಿದ್ದು, ಇದರಿಂದ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ವಾಯು ಪ್ರದೇಶದಲ್ಲಿನ ಪ್ರಯಾಣಿಕ ವಿಮಾನಗಳಿಗೆ ಅಪಾಯ ಬರುವ ಸಾಧ್ಯತೆ ಇತ್ತು ಎಂದು ಪಾಕಿಸ್ತಾನ ಆರೋಪಿಸಿತ್ತು.
ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ರಕ್ಷಣಾ ಸಚಿವಾಲಯ, ಮಾರ್ಚ್ 9ರ ಬುಧವಾರದಂದು ನಿರ್ವಹಣೆ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಯಿಂದ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆಯಾಗಿದೆ. ಈ ಘಟನೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ನ್ಯಾಯಾಲಯದ ತನಿಖೆಗೆ ಆದೇಶಿಸಿದೆ ಎಂದು ಹೇಳಿದೆ.












































